ಮೂಡುಬಿದಿರೆ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಅಭೂತಪೂರ್ವ ಪ್ರದರ್ಶನ ನೀಡಿದ್ದು, ಒಟ್ಟು 12 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಆಳ್ವಾಸ್ ತಂಡವು ಪುರುಷರ ಮತ್ತು ಮಹಿಳೆಯರ ವಿಭಾಗದ ಕಬಡ್ಡಿ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಅಥ್ಲೆಟಿಕ್ಸ್ ಹಾಗೂ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ಪಾರಮ್ಯ ಮೆರೆದಿದೆ. ವೈಯಕ್ತಿಕ ಸ್ಪರ್ಧೆಗಳಲ್ಲೂ ಭರ್ಜರಿ ಪದಕ ಬೇಟೆಯಾಡಿರುವ ಕ್ರೀಡಾಪಟುಗಳು, ಅಥ್ಲೆಟಿಕ್ಸ್‌ನಲ್ಲಿ 16 ಚಿನ್ನ, 17 ಬೆಳ್ಳಿ ಹಾಗೂ 1 ಕಂಚು, ಕುಸ್ತಿಯಲ್ಲಿ 10 ಚಿನ್ನ, 10 ಬೆಳ್ಳಿ ಹಾಗೂ 5 ಕಂಚು ಮತ್ತು ಯೋಗಾಸನದಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಎಲ್ಲಾ 12 ವಿಭಾಗಗಳಲ್ಲಿ ಜಯಭೇರಿ ಬಾರಿಸಿದ ಆಳ್ವಾಸ್‌ನ ವಿದ್ಯಾರ್ಥಿಗಳು ಮುಂಬರುವ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ಸಂಸ್ಥೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದ ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.