image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

10 ಮೀ. ಏರ್ ರೈಫಲ್ ಫೈನಲ್‌ಗೆ ಭಾರತೀಯ ಜೋಡಿ ಪ್ರವೇಶ; ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌ನಲ್ಲಿ ಪಿ.ವಿ. ಸಿಂಧುಗೆ ಸೋಲು

10 ಮೀ. ಏರ್ ರೈಫಲ್ ಫೈನಲ್‌ಗೆ ಭಾರತೀಯ ಜೋಡಿ ಪ್ರವೇಶ; ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌ನಲ್ಲಿ ಪಿ.ವಿ. ಸಿಂಧುಗೆ ಸೋಲು

ಜಪಾನ್ : ಏಷ್ಯನ್ ಗೇಮ್ಸ್ 2026ರ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಭಾರತದ ಭರವಸೆಯ ತಾರೆಗಳಾದ ಇಲಾವೆನಿಲ್ ವಲರಿವನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸಿದೆ. ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ ಒಟ್ಟು 634.6 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನೊಂದೆಡೆ, ಚೀನಾ ತಂಡವು ಅರ್ಹತಾ ಸುತ್ತಿನಲ್ಲಿ 638.9 ಅಂಕಗಳನ್ನು ಗಳಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇಂದು ನಡೆಯಲಿರುವ ಬಹುನಿರೀಕ್ಷಿತ ಚಿನ್ನದ ಪದಕದ ಪಂದ್ಯದಲ್ಲಿ ಭಾರತವು ಚೀನಾ ತಂಡವನ್ನು ಎದುರಿಸಲಿದೆ.

ಮತ್ತೊಂದೆಡೆ, ಬ್ಯಾಡ್ಮಿಂಟನ್ ಅಂಗಳದಿಂದ ಭಾರತಕ್ಕೆ ನಿರಾಶಾದಾಯಕ ಸುದ್ದಿ ಹೊರಬಿದ್ದಿದ್ದು, ಕ್ವಾರ್ಟರ್ ಫೈನಲ್‌ನ ಮೊದಲ ಪಂದ್ಯದಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಅವರು ಜಪಾನ್‌ನ ಅಕಾನೆ ಯಮುಗುಚಿ ವಿರುದ್ಧ ಸೋಲನುಭವಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಮೂರು ಗೇಮ್‌ಗಳ ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು ಸಿಂಧು 23-21 ಅಂತರದಿಂದ ಗೆದ್ದು ಶುಭಾರಂಭ ಮಾಡಿದರು. ಆದರೆ, ಎರಡನೇ ಗೇಮ್‌ನಲ್ಲಿ ಪ್ರಬಲವಾಗಿ ಪುಟಿದೆದ್ದ ಯಮುಗುಚಿ 21-18 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು. ಬಳಿಕ ನಡೆದ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಪಾರಮ್ಯ ಮೆರೆದ ಜಪಾನ್‌ನ ಶಟ್ಲರ್ 21-11 ಅಂತರದ ಜಯ ದಾಖಲಿಸುವ ಮೂಲಕ ಪಂದ್ಯವನ್ನು 2-1 ಗೇಮ್‌ಗಳಿಂದ ತಮ್ಮದಾಗಿಸಿಕೊಂಡರು. ಒಟ್ಟು ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಸುದೀರ್ಘ ರ್ಯಾಲಿಗಳ ಮೂಲಕ ತೀವ್ರ ಪೈಪೋಟಿ ನಡೆಸಿದರು.

Category
ಕರಾವಳಿ ತರಂಗಿಣಿ