ಮೂಡುಬಿದಿರೆ: ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು 12 ಚಿನ್ನ, 5 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ ಒಟ್ಟು 26 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಸಂಸ್ಥೆಯ ಕ್ರೀಡಾಪಟುಗಳು 5 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಮಿಂಚಿದ ಆರಂಭಮ್ ರಾಜು 60 ಮೀಟರ್ ಓಟದಲ್ಲಿ ಪ್ರಥಮ ಹಾಗೂ 80 ಮೀಟರ್ ಹರ್ಡಲ್ಸ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು. ನಿತಿನ್ ಎಲ್.ಜಿ. (ಚಕ್ರ ಎಸೆತ), ಜಸ್ವೀನ್ ಥೋಮಸ್ (ಎತ್ತರ ಜಿಗಿತ) ಹಾಗೂ ಸಾಹಿಲ್ (100 ಮೀಟರ್) ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದರು. ಇನ್ನು ಸುಭಾಷ್ ಆರ್. (ತ್ರಯತ್ಲಾನ್ ಸಿ), ಹೆಚ್. ಮೈಲಾರಿ (ಚಕ್ರ ಎಸೆತ), ಆಕಾಶ್ ಹುಕ್ಕೇರಿ (ಮಿಡಲ್ ರಿಲೇ), ಸಮರ್ಥ್ ಸಂಜೀವ್ ಕುಮಾರ್ (1000 ಮೀಟರ್), ಸಾಹಿಲ್ (ಮಿಡಲ್ ರಿಲೇ), ನೋವಲ್ ಆರ್.ಪಿ. (ಉದ್ದ ಜಿಗಿತ) ಹಾಗೂ ಅಬ್ದುಲ್ ರಜಕ್ ಶಿಗ್ಗಾನ (ಹ್ಯಾಮರ್ ತ್ರೋ) ತೃತೀಯ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು.
ಬಾಲಕಿಯರ ವಿಭಾಗದಲ್ಲಿ ತಮನ್ನಾ 1500 ಮೀಟರ್ ಹಾಗೂ 5000 ಮೀಟರ್ ಓಟದ ಎರಡೂ ವಿಭಾಗಗಳಲ್ಲಿ ನೂತನ ಕೂಟ ದಾಖಲೆಗಳೊಂದಿಗೆ ಪ್ರಥಮ ಸ್ಥಾನ ಪಡೆದು ದ್ವಿಪದಕದ ಸಾಧನೆ ಮಾಡಿದರು. ಮೇಘಾ ಅಶೋಕ್ ಪೂಜಾರಿ 600 ಮೀಟರ್ ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಹಾಗೂ ಮಿಡಲ್ ರಿಲೇಯಲ್ಲೂ ಪ್ರಥಮ ಸ್ಥಾನ ಗಳಿಸಿದರು. ನಿರಂಜನ 5 ಕಿ.ಮೀ. ನಡಿಗೆಯಲ್ಲಿ ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರೆ, ಭಗೀರಥಿ (3 ಕಿ.ಮೀ. ನಡಿಗೆ) ಹಾಗೂ ನಾಗಿಣಿ (1000 ಮೀಟರ್ ಮತ್ತು ಮಿಡಲ್ ರಿಲೇ) ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದರು. ಬಾನವಿ ಪಿ.ಎಸ್. (400 ಮೀಟರ್ ದ್ವಿತೀಯ, ಮಿಡಲ್ ರಿಲೇ ಪ್ರಥಮ), ಚರೀಷ್ಮಾ (3000 ಮೀಟರ್ ದ್ವಿತೀಯ, 5000 ಮೀಟರ್ ತೃತೀಯ) ಹಾಗೂ ರೀತುಶ್ರೀ (400 ಮೀಟರ್ ತೃತೀಯ, 4*400 ಮೀಟರ್ ರಿಲೇ ಪ್ರಥಮ) ಪದಕದ ಕೊಡುಗೆ ನೀಡಿದರು.
ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರಿ ರಾಜ್ಯ ಹಾಗೂ ಸಂಸ್ಥೆಯ ಕೀರ್ತಿಯನ್ನು ಎತ್ತಿಹಿಡಿದ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.