ಜಪಾನ್ : ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಮಹಿಳಾ ಹಾಕಿ 'ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡವು ಉಜ್ಬೇಕಿಸ್ತಾನ್ ವಿರುದ್ಧ 19-0 ಅಂತರದ ದೈತ್ಯ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದ ಬಲಿಷ್ಠ ಭಾರತೀಯ ಪಡೆ, ಸತತ ಗೋಲುಗಳ ಮಳೆಗರೆದು ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಈ ಪಂದ್ಯದಲ್ಲಿ 22 ವರ್ಷದ ಯುವ ಆಟಗಾರ್ತಿ ದೀಪಿಕಾ ಸೆಹ್ರಾವತ್ ಅವರು ದಾಖಲೆಯ 8 ಗೋಲುಗಳನ್ನು ಬಾರಿಸಿ ಮಿಂಚಿದರು. ಇದು ಏಷ್ಯನ್ ಕ್ರೀಡಾಕೂಟದ ಪಂದ್ಯವೊಂದರಲ್ಲಿ ಭಾರತದ ಆಟಗಾರ್ತಿಯೊಬ್ಬರು ನೀಡಿದ ಅತ್ಯುತ್ತಮ ಹಾಗೂ ಸ್ಮರಣೀಯ ಪ್ರದರ್ಶನವಾಗಿದೆ. ಪ್ರಥಮಾರ್ಧದಲ್ಲಿ 8 ಗೋಲು ಬಾರಿಸಿದ್ದ ಭಾರತ ತಂಡ, ದ್ವಿತಿಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿ 11 ಗೋಲುಗಳನ್ನು ಕಬಳಿಸಿತು.
ದೀಪಿಕಾ ಹೊರತಾಗಿ ಮಿಡ್ಫೀಲ್ಡರ್ ಇಶಿಕಾ ಚೌಧರಿ (11, 42, 54ನೇ ನಿಮಿಷ) ಹ್ಯಾಟ್ರಿಕ್ ಸಾಧನೆ ಮಾಡಿದರು. ಉಳಿದಂತೆ ಲಾಲ್ರೆಮ್ಸಿಯಾಮಿ (7ನೇ ನಿಮಿಷ), ಬಲ್ಜೀತ್ ಕೌರ್ (12ನೇ ನಿಮಿಷ), ನೇಹಾ (18ನೇ ನಿಮಿಷ), ನವನೀತ್ ಕೌರ್ (23 ಹಾಗೂ 45ನೇ ನಿಮಿಷ), ಲಾಲ್ಥಾಂಟ್ಲುವಾಂಗಿ (43 ಹಾಗೂ 51ನೇ ನಿಮಿಷ) ಮತ್ತು ಸಾಕ್ಷಿ ರಾಣಾ (43ನೇ ನಿಮಿಷ) ಗೋಲು ಗಳಿಸಿ ತಂಡದ ಬೃಹತ್ ಗೆಲುವಿಗೆ ಕಾರಣರಾದರು. ಆರಂಭಿಕ ಪಂದ್ಯದಲ್ಲೇ ಧಮಾಕಾ ಎಬ್ಬಿಸಿರುವ ಭಾರತ ತಂಡವು ಸೆಪ್ಟೆಂಬರ್ 21ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾವನ್ನು ಎದುರಿಸಲಿದೆ. ಆ ಬಳಿಕ ಥಾಯ್ಲೆಂಡ್ (ಸೆ. 23), ಆತಿಥೇಯ ಜಪಾನ್ (ಸೆ. 25) ಹಾಗೂ ಸಿಂಗಪುರ (ಸೆ. 27) ತಂಡಗಳ ವಿರುದ್ಧ ಭಾರತ ಸೆಣಸಾಡಲಿದೆ.