ಹೈದರಾಬಾದ್ : 2026ರ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ಅಕ್ಟೋಬರ್ 27ರಿಂದ ಮೊಹಾಲಿಯಲ್ಲಿ ನಡೆಯಲಿದ್ದು, ಪಂದ್ಯಾವಳಿಯ ಸ್ಥಳ ಬದಲಾವಣೆ ಅಥವಾ ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಬದಲಿಸುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಏಷ್ಯನ್ ಹಾಕಿ ಫೆಡರೇಶನ್ (AHF) ಅನ್ನು ಕೋರಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಕ್ಷ್ಮ ಸಂಬಂಧಗಳು ಮತ್ತು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಮನವಿ ಮಾಡಲಾಗಿದೆ ಎಂದು PHF ಅಧ್ಯಕ್ಷ ಮೊಹಿಯುದ್ದೀನ್ ಅಹ್ಮದ್ ವಾನಿ ತಿಳಿಸಿದ್ದಾರೆ.
ಆದರೆ ಪಾಕಿಸ್ತಾನದ ಈ ಮನವಿಯನ್ನು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಪಂದ್ಯಾವಳಿಯ ಸ್ಥಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಪಾಕಿಸ್ತಾನ ಪಂದ್ಯಾವಳಿಯಲ್ಲಿ ಆಡಲು ಬಯಸಿದರೆ ಭಾರತಕ್ಕೆ ಬರಲೇಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಪರ್ಯಾಯವಾಗಿ ಬಾಂಗ್ಲಾದೇಶ ಅಥವಾ ಒಮಾನ್ ತಂಡಗಳಿಗೆ ಅವಕಾಶ ನೀಡಲಾಗುವುದು ಎಂದು ಅವರು ವಿವರ ನೀಡಿದ್ದಾರೆ.
ತಮ್ಮ ರಾಷ್ಟ್ರೀಯ ತಂಡಕ್ಕೆ ಭಾರತಕ್ಕೆ ಪ್ರಯಾಣಿಸಲು ಇನ್ನು ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಈ ನಡುವೆ, ಭಾರತದಲ್ಲಿ ಆಯೋಜಿಸಲಾಗುವ ಬಹುರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಕಿಸ್ತಾನದ ತಂಡಗಳು ಸ್ಪರ್ಧಿಸಲು ಭಾರತದ ಕ್ರೀಡಾ ನೀತಿ ಅವಕಾಶ ನೀಡುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದರು.
ಭದ್ರತಾ ಕಾರಣಗಳನ್ನು ನೀಡಿ ಪಾಕಿಸ್ತಾನವು ಈ ಹಿಂದೆ ತಮಿಳುನಾಡಿನಲ್ಲಿ ನಡೆದ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಹಾಗೂ ಏಷ್ಯಾ ಕಪ್ ಪಂದ್ಯಾವಳಿಗಳಿಂದಲೂ ಹಿಂದೆ ಸರಿದಿತ್ತು. 2026ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಮಲೇಷ್ಯಾ, ಚೀನಾ, ಜಪಾನ್ ಮತ್ತು ಕೊರಿಯಾ ತಂಡಗಳು ಭಾಗವಹಿಸಬೇಕಿದ್ದು, ಪಾಕಿಸ್ತಾನ ಹಿಂದೆ ಸರಿದರೆ ಇತರ ದೇಶಗಳಿಗೆ ಅವಕಾಶ ದೊರೆಯಲಿದೆ.