image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯಾ ಕಪ್ ಗೆದ್ದರೂ ಪಾಕ್ ಅಧಿಕಾರಿ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ನಿರಾಕರಣೆ

ಏಷ್ಯಾ ಕಪ್ ಗೆದ್ದರೂ ಪಾಕ್ ಅಧಿಕಾರಿ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ನಿರಾಕರಣೆ

ದುಬೈ : ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಎಂಟನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಭರ್ಜರಿ ಜಯ ಸಾಧಿಸಿದರೂ, ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೈಡ್ರಾಮಾವೊಂದು ನಡೆದಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥರಾದ ಮೊಹ್ಸಿನ್ ನಖ್ವಿ ಅವರಿಂದ ಚಾಂಪಿಯನ್ಸ್ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ಮಹಿಳಾ ಆಟಗಾರರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಾರಂಭವಾಗಲು ಸುಮಾರು 40 ನಿಮಿಷಗಳ ಕಾಲ ವಿಳಂಬವಾಯಿತು. ವೇದಿಕೆಯ ಮೇಲೆ ನಿಂತಿದ್ದ ಮೊಹ್ಸಿನ್ ನಖ್ವಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರತೀಯ ತಂಡಕ್ಕಾಗಿ ಕಾಯುತ್ತಿದ್ದರು. ಈ ವೇಳೆಯಲ್ಲಿ ರನ್ನರ್ ಅಪ್ ಪಡೆದ ಶ್ರೀಲಂಕಾ ತಂಡದ ನಾಯಕಿ ಚಮರಿ ಅಟಪಟ್ಟು ಹಾಗೂ ಅವರ ತಂಡದ ಆಟಗಾರರು ನಖ್ವಿ ಅವರಿಂದ ಪದಕ ಹಾಗೂ ಚೆಕ್ ಸ್ವೀಕರಿಸಿದರು. ಆದರೆ, ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಮ್‌ನಿಂದ ಹೊರಬರದೆ, ಪಾಕ್ ಸಚಿವ ಹಾಗೂ ಪಿಸಿಬಿ ಮುಖ್ಯಸ್ಥ ನಖ್ವಿ ಅವರಿಂದ ಟ್ರೋಫಿ ಪಡೆಯದಿರಲು ನಿರ್ಧರಿಸಿದರು.

ಭಾರತೀಯ ತಂಡದ ಈ ನಿರ್ಧಾರದಿಂದ ವೇದಿಕೆಯ ಮೇಲಿದ್ದ ಮೊಹ್ಸಿನ್ ನಖ್ವಿ ತೀವ್ರ ಮುಜುಗರಕ್ಕೊಳಗಾದರು. ಕೊನೆಗೆ ಟ್ರೋಫಿ ಪ್ರದಾನ ಮಾಡಲು ಸಾಧ್ಯವಾಗದೆ ನಖ್ವಿ ಮೈದಾನದಿಂದ ನಿರ್ಗಮಿಸಿ, ಅವಸರದಲ್ಲಿ ಕಾರನ್ನೇರಿ ಹೊರಟುಹೋದರು. ಕಳೆದ ವರ್ಷ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲೂ ಭಾರತೀಯ ಪುರುಷರ ತಂಡ ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿ ವಿವಾದ ಸೃಷ್ಟಿಯಾಗಿತ್ತು. ಇದೀಗ ಅದೇ ಹಾದಿಯನ್ನು ಮಹಿಳಾ ಕ್ರಿಕೆಟ್ ತಂಡವೂ ಮುಂದುವರಿಸಿದ್ದು, ಮೈದಾನದಲ್ಲಿ ಅಧಿಕೃತ ಟ್ರೋಫಿ ಇಲ್ಲದೆಯೇ ಭಾರತೀಯ ವನಿತೆಯರು ಸಂಭ್ರಮಾಚರಣೆ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ