ದುಬೈ: ಭಾರೀ ನಿರೀಕ್ಷೆ ಮೂಡಿಸಿದ್ದ ವನಿತೆಯರ ಟಿ-20 ವಿಶ್ವಕಪ್ನಲ್ಲಿ ಹೊಸ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ದಕ್ಷಿಣಾ ಆಫ್ರಿಕಾ ವನಿತೆಯರ ಮೇಲೆ ಸವಾರಿ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ಚೊಚ್ಚಲ ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡರು. ಸತತ 2ನೇ ಬಾರಿಗೆ ಹರಿಣಗಳ ತಂಡ ನಿರಾಸೆ ಅನುಭವಿಸಿ ಚೋಕರ್ಸ್ ಹಣೆಪಟ್ಟಿಯನ್ನು ಹಾಗೇ ಉಳಿಸಿಕೊಂಡಿತು.
ಕಿವೀಸ್ನ ಅಮೇಲಿಯಾ ಕೆರ್ ಆಲ್ರೌಂಡರ್ ಆಟ, ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲ್ಯಾಂಡ್ ಮಹಿಳೆಯರು ದುಬೈನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ರಾರಾಜಿಸಿದರು. ಯಾವುದೇ ಹಂತದಲ್ಲಿ ಹರಿಣಗಳ ತಂಡ ಮೇಲೇಳದಂತೆ ತಡೆದರು. ಇದರಿಂದ ತಂಡ 32 ರನ್ಗಳ ಸೋಲು ಕಂಡಿತು.
ನ್ಯೂಜಿಲ್ಯಾಂಡ್ ಮಹಿಳೆಯರು ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ನ ಫೈನಲ್ ತಲುಪಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಸೋಫಿ ಡಿವೈನ್ ನೇತೃತ್ವದ ತಂಡ ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡು ಕುಣಿದಾಡಿತು. ಇನ್ನೂ ದಕ್ಷಿಣ ಆಫ್ರಿಕಾ ವನಿತೆಯರ ಅದೃಷ್ಟ ಮತ್ತೆ ಕೈಕೊಟ್ಟಿತು. 2023 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಬಾರಿ ಕಿವೀಸ್ ಪಡೆಯ ಮುಂದೆ ಸೋಲು ಕಂಡು ಸತತ ಎರಡನೇ ಬಾರಿಯೂ ವಿಶ್ವಕಪ್ ಅನ್ನು ಕಳೆದುಕೊಂಡಿತು.