ಮೂಡುಬಿದಿರೆ: ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ಜರುಗಿದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಅವಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಹುಡುಗರ ವಿಭಾಗದಲ್ಲಿ 04 ಚಿನ್ನ, 02 ಬೆಳ್ಳಿ ಮತ್ತು 03 ಕಂಚಿನೊಂದಿಗೆ ಒಟ್ಟು 09 ಪದಕಗಳನ್ನು ಪಡೆದ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು. ಈ ವಿಭಾಗದಲ್ಲಿ ಪೃಥ್ವಿರಾಜ್ (57 ಕೆಜಿ), ಪ್ರಣವ್ (70 ಕೆಜಿ), ರಜತ್ ಬಸು (74 ಕೆಜಿ) ಮತ್ತು ರಿತ್ವಿಕ್ (86 ಕೆಜಿ) ಚಿನ್ನದ ಪದಕ ಪಡೆದರೆ, ಆಕಾಶ್ (61 ಕೆಜಿ) ಹಾಗೂ ಅನೂಪ್ (65 ಕೆಜಿ) ಬೆಳ್ಳಿ ಪದಕ ಪಡೆದುಕೊಂಡರು. ರೋಹನ್ ಎಸ್ (70 ಕೆಜಿ), ಮಹಮ್ಮದ್ ಶಿಹಾಮ್ ಶಬೀರ್ (92 ಕೆಜಿ) ಮತ್ತು ಕಾರ್ತಿಕ್ (97+ ಕೆಜಿ) ಕಂಚಿನ ಪದಕ ಜಯಿಸಿದರು.
ಹುಡುಗಿಯರ ವಿಭಾಗದಲ್ಲಿ 05 ಚಿನ್ನ, 04 ಬೆಳ್ಳಿ ಹಾಗೂ 01 ಕಂಚಿನೊಂದಿಗೆ ಒಟ್ಟು 10 ಪದಕಗಳನ್ನು ಬಾಚಿಕೊಂಡ ಆಳ್ವಾಸ್ ಕ್ರೀಡಾಪಟುಗಳು ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ವಿಭಾಗದಲ್ಲಿ ಗಂಗಮ್ಮ (55 ಕೆಜಿ), ದೀಪ್ತಿ (59 ಕೆಜಿ), ತೇಜಸ್ವಿನಿ (62 ಕೆಜಿ), ಸ್ಪೂರ್ತಿ (65 ಕೆಜಿ) ಹಾಗೂ ನವ್ಯಶ್ರೀ (76 ಕೆಜಿ) ಚಿನ್ನದ ಪ್ರಶಸ್ತಿ ಗಳಿಸಿದರೆ, ತನುಶ್ರೀ (50 ಕೆಜಿ), ಸಿಂಚನಾ (53 ಕೆಜಿ), ಚೈತ್ರಾ (68 ಕೆಜಿ) ಮತ್ತು ತ್ರಿಪಾ (72 ಕೆಜಿ) ಬೆಳ್ಳಿ ಪದಕ ಪಡೆದರು. ಚಾರ್ವಿ (57 ಕೆಜಿ) ಕಂಚಿನ ಪದಕ ಗೆದ್ದುಕೊಂಡರು.
ಜಿಲ್ಲಾಮಟ್ಟದಲ್ಲಿ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.