image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಪಾನ್ ವಿರುದ್ಧ 7-0 ಭರ್ಜರಿ ಗೆಲುವು ಬಾರಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಜಪಾನ್ ವಿರುದ್ಧ 7-0 ಭರ್ಜರಿ ಗೆಲುವು ಬಾರಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಹೈದರಾಬಾದ್ : ಮಹಿಳಾ ಜೂನಿಯರ್ ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಅಪ್ರತಿಮ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮಂಗಳವಾರ ನಡೆದ ಎಲೈಟ್ ಪೂಲ್‌ನ ಮೂರನೇ ಪಂದ್ಯದಲ್ಲಿ ಜಪಾನ್ ವಿರುದ್ಧ 7-0 ಅಂತರದ ಬೃಹತ್ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಜಯದೊಂದಿಗೆ ಆಡಿದ ಮೂರೂ ಪಂದ್ಯಗಳಲ್ಲಿ 9 ಅಂಕಗಳನ್ನು ಪಡೆದುಕೊಂಡಿರುವ ಭಾರತ ತಂಡ, ಎಲೈಟ್ ಪೂಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಆರಂಭದಿಂದಲೇ ಸಂಪೂರ್ಣ ಹಿಡಿತ ಸಾಧಿಸಿದ ಭಾರತಕ್ಕೆ ಪಂದ್ಯದ 5ನೇ ನಿಮಿಷದಲ್ಲಿ ಕೃಷ್ಣ ಶರ್ಮಾ ಮೊದಲ ಗೋಲು ತಂದುಕೊಟ್ಟರು. ತದನಂತರ 9ನೇ ನಿಮಿಷದಲ್ಲಿ ಜಪಾನಿನ ಡಿಫೆಂಡರ್ ಮಾಡಿದ ಫೌಲ್‌ನಿಂದಾಗಿ ಸಿಕ್ಕ ಪೆನಾಲ್ಟಿಯನ್ನು ಸುಪ್ರಿಯಾ ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದರು. 14ನೇ ನಿಮಿಷದಲ್ಲಿ ಪೂರ್ಣಿಮಾ ಯಾದವ್ ಬಾರಿಸಿದ ಫೀಲ್ಡ್ ಗೋಲ್ ನೆರವಿನಿಂದ ಭಾರತ ಮೊದಲ ಕ್ವಾರ್ಟರ್ ಅಂತ್ಯಕ್ಕೆ 3-0 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್ ಚೇತರಿಸಿಕೊಳ್ಳಲು ಯತ್ನಿಸಿದರೂ, ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ಪರ ಗೀತಾ ಯಾದವ್ 41 ಮತ್ತು 45ನೇ ನಿಮಿಷಗಳಲ್ಲಿ ಎರಡು ಸತತ ಗೋಲುಗಳನ್ನು ಬಾರಿಸಿದರು. ಇದರ ಬೆನ್ನಲ್ಲೇ 46ನೇ ನಿಮಿಷದಲ್ಲಿ ಪೂರ್ಣಿಮಾ ಯಾದವ್ ಕೂಡ ತಮ್ಮ ಎರಡನೇ ಗೋಲು ಗಳಿಸುವುದರೊಂದಿಗೆ ಮೂರನೇ ಕ್ವಾರ್ಟರ್ ಅಂತ್ಯಕ್ಕೆ ಭಾರತ 6-0 ಅಂತರದ ಬೃಹತ್ ಮುನ್ನಡೆ ಪಡೆಯಿತು. ಕೊನೆಯದಾಗಿ 50ನೇ ನಿಮಿಷದಲ್ಲಿ ಸಾನಿಕಾ ಚಂದ್ರಕಾಂತ್ ಮಾನೆ ಗೋಲು ಬಾರಿಸಿ ತಂಡಕ್ಕೆ 7-0 ಅಂತರದ ಭರ್ಜರಿ ಜಯ ತಂದಿತ್ತರು.

ಟೂರ್ನಿಯಲ್ಲಿ ಕೊರಿಯಾ ವಿರುದ್ಧ 4-1 ಹಾಗೂ ಮಲೇಷ್ಯಾ ವಿರುದ್ಧ 11-1 ಅಂತರದಲ್ಲಿ ಜಯಗಳಿಸಿದ್ದ ಭಾರತ, ಬುಧವಾರ (ಸೆಪ್ಟೆಂಬರ್ 9) ನಡೆಯಲಿರುವ ತನ್ನ ಕೊನೆಯ ಪೂಲ್ ಪಂದ್ಯದಲ್ಲಿ ಚೀನಾವನ್ನು ಎದುರಿಸಲಿದೆ. ಪ್ರಸ್ತುತ ಎರಡು ಪಂದ್ಯಗಳಿಂದ 6 ಅಂಕ ಹೊಂದಿರುವ ಚೀನಾ ವಿರುದ್ಧದ ಈ ಪಂದ್ಯದ ಫಲಿತಾಂಶವು ಪೂಲ್‌ನ ಅಂತಿಮ ಅಗ್ರಸ್ಥಾನವನ್ನು ನಿರ್ಧರಿಸಲಿದೆ.

Category
ಕರಾವಳಿ ತರಂಗಿಣಿ