ದುಬೈ : ಟೀಮ್ ಇಂಡಿಯಾದ ಸ್ಪೋಟಕ ಆರಂಭಿಕ ಆಟಗಾರ್ತಿ ಶಾಫಾಲಿ ವರ್ಮಾ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಮಾಡುವ ಮೂಲಕ ಒಂದೇ ಪಂದ್ಯದಲ್ಲಿ ಮೂರು ಹೊಸ ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇನಿಂಗ್ಸ್ ಆರಂಭಿಸಿದ ಶಾಫಾಲಿ, ಗಳಿಸಿದ್ದು ಕೇವಲ 12 ರನ್ಗಳಾದರೂ ಐತಿಹಾಸಿಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಪಂದ್ಯದಲ್ಲಿ ತಾನೆದುರಿಸಿದ ಅತ್ಯಂತ ಮೊದಲ ಎಸೆತದಲ್ಲೇ ಪಾಕಿಸ್ತಾನದ ಸಾದಿಯಾ ಇಕ್ಬಾಲ್ ಎಸೆತಕ್ಕೆ ಭರ್ಜರಿ ಸಿಕ್ಸರ್ ಸಿಡಿಸಿದ ಶಾಫಾಲಿ, ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಎರಡು ಬಾರಿ ಇನಿಂಗ್ಸ್ನ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಟಿ20 ಪಂದ್ಯದಲ್ಲೂ ಇವರೇ ಸಾದಿಯಾ ಇಕ್ಬಾಲ್ ಅವರ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದರು.
ಇದರ ಜೊತೆಗೆ, ಈ 12 ರನ್ಗಳ ನೆರವಿನಿಂದ ಶಾಫಾಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 3,000 ರನ್ಗಳ ಗಡಿ ದಾಟಿದ್ದಾರೆ. ಕೇವಲ 2,182 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತಿ ಕಡಿಮೆ ಎಸೆತಗಳಲ್ಲಿ 3,000 ರನ್ ಪೂರೈಸಿದ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ (2,321 ಎಸೆತಗಳು) ಅವರ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಕೇವಲ 22 ವರ್ಷ 220 ದಿನಗಳ ಪ್ರಾಯದಲ್ಲೇ ಈ ಮೈಲಿಗಲ್ಲು ತಲುಪಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ 3,000 ರನ್ ಗಳಿಸಿದ ಐರ್ಲೆಂಡ್ನ ಗ್ಯಾಬಿ ಲೂಯಿಸ್ (24 ವರ್ಷ 347 ದಿನಗಳು) ಅವರ ವಿಶ್ವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.