ಬೆಂಗಳೂರು : ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನವಾದ ಇಂದು ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿತು. ಭಾರತ ನೀಡಿದ್ದ 107 ರನ್‌ಗಳ ಗುರಿ ಬೆನ್ನತ್ತಿದ ಕಿವೀಸ್, ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಇದರೊಂದಿಗೆ 36 ವರ್ಷಗಳ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಗೆಲುವಿನ ಸಿಹಿ ಕಂಡಿದೆ. 1988ರಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ ಟೆಸ್ಟ್ ಪಂದ್ಯ ಗೆದ್ದಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 462 ರನ್ಗಳನ್ನು ಕಲೆಹಾಕಿ 356 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಸರ್ಫರಾಜ್ ಖಾನ್ (150) ಮತ್ತು ರಿಷಭ್ ಪಂತ್ (99) ಬ್ಯಾಟಿಂಗ್ ನೆರವಿನಿಂದ 462 ರನ್ ದಾಖಲಿಸಿತು. ಆದರೆ, 356 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ಗೆ ಕೇವಲ 107 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಯಿತು.
ಇದಕ್ಕುತ್ತರವಾಗಿ, ಎರಡನೇ ಇನ್ನಿಂಗ್ಸ್ನಲ್ಲಿ ಕಿವೀಸ್ ತಂಡ ಡೆವೋನ್ ಕಾನ್ವೆ (17), ವಿಲ್ ಯಂಗ್ (37), ರಚಿನ್ ರವೀಂದ್ರ (38) ಅವರ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಇನ್ನಿಂಗ್ಸ್ನಲ್ಲಿ ಬುಮ್ರಾ 2 ವಿಕೆಟ್ ಪಡೆದರು.