image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನ ಬ್ಯಾಟಿಂಗ್‌ ವಿರುದ್ಧ ಮೈಕಲ್ ವಾನ್ ಆಕ್ರೋಶ

ಪಾಕಿಸ್ತಾನ ಬ್ಯಾಟಿಂಗ್‌ ವಿರುದ್ಧ ಮೈಕಲ್ ವಾನ್ ಆಕ್ರೋಶ

ಲಾರ್ಡ್ಸ್‌ : ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ ಕೇವಲ 110 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಬಾಬರ್ ಆಜಮ್ (8), ಶಾನ್ ಮಸೂದ್ (1) ಹಾಗೂ ಮೊಹಮ್ಮದ್ ರಿಜ್ವಾನ್ (7) ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು. ಆರಂಭಿಕ ಆಟಗಾರ ಅಜಾನ್ ಅವೈಸ್ ಗಳಿಸಿದ 46 ರನ್‌ಗಳೇ ತಂಡದ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಮತ್ತೊಬ್ಬ ಆರಂಭಿಕ ಇಮಾಮ್-ಉಲ್-ಹಕ್ ಹಿಮ್ಮಡಿ ನೋವಿನಿಂದಾಗಿ ಬ್ಯಾಟಿಂಗ್‌ಗೆ ಬರಲಿಲ್ಲ. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 81 ರನ್ ಗಳಿಸಿದ್ದು, ಒಟ್ಟಾರೆ 261 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದೆ.

ಪಾಕ್ ಪಡೆಯ ಈ ದಯನೀಯ ಬ್ಯಾಟಿಂಗ್ ಪ್ರದರ್ಶನವನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಬಿಬಿಸಿ 'ಟೆಸ್ಟ್ ಮ್ಯಾಚ್ ಸ್ಪೆಷಲ್' ಕಾರ್ಯಕ್ರಮದಲ್ಲಿ ಕಠಿಣ ಪದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ಮೈದಾನದಲ್ಲಿ ಇಂಗ್ಲೆಂಡ್ ಬೌಲರ್‌ಗಳಿಗೆ ಪಾಕಿಸ್ತಾನ ಯಾವುದೇ ರೀತಿಯ ಸವಾಲನ್ನೇ ನೀಡುತ್ತಿಲ್ಲ ಎಂದಿರುವ ವಾನ್, ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸುವ ಬ್ಯಾಟಿಂಗ್ ಸಾಲನ್ನು ಪಾಕಿಸ್ತಾನ ಹೊಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳಿಗೆ ರನ್ ನೀಡುವ ಭಯವೇ ಇಲ್ಲದಂತಾಗಿದ್ದು, 'ಸಾಲಿನಲ್ಲಿ ಬನ್ನಿ, ಯಾರಿಗೆಲ್ಲ ವಿಕೆಟ್ ಬೇಕು?' ಎನ್ನುವ ರೀತಿಯಲ್ಲಿ ವಿಕೆಟ್‌ಗಳು ಬೀಳುತ್ತಿವೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನದ ಬ್ಯಾಟಿಂಗ್ ಪಡೆಯನ್ನು ಕೌಂಟಿ ಕ್ರಿಕೆಟ್‌ನ ಎರಡನೇ ಡಿವಿಷನ್ ತಂಡಕ್ಕೆ ಹೋಲಿಸಿದ ವಾನ್, ಇದನ್ನು ಯಾವುದೇ ಕೋನದಲ್ಲೂ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಲೈನ್‌ಅಪ್ ಎಂದು ಕರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಪಾಕಿಸ್ತಾನ ದೊಡ್ಡ ಮೊತ್ತ ಬಾರಿಸುವುದಿಲ್ಲ ಎಂಬುದು ತಿಳಿದಿರುವುದರಿಂದ ಇಂಗ್ಲೆಂಡ್ ಬೌಲರ್‌ಗಳು ಪೂರ್ಣ ಶಕ್ತಿ ಹಾಕಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ನಾಯಕ ಜೋ ರೂಟ್ ಬಳಿ ತಾವೇ ಮುಂದೆ ಹೋಗಿ ಓವರ್‌ಗಳನ್ನು ಕೇಳಿ ಪಡೆದು ವಿಕೆಟ್ ಕಬಳಿಸುತ್ತಿದ್ದಾರೆ ಎಂದು ಚಾಟಿ ಬೀಸಿದ್ದಾರೆ. ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ಕಂಡಿದ್ದ ಪಾಕಿಸ್ತಾನ, ಇದೀಗ ಎರಡನೇ ಪಂದ್ಯದಲ್ಲೂ ಮತ್ತೊಂದು ಹೀನಾಯ ಸೋಲಿನತ್ತ ಮುಖ ಮಾಡಿದೆ.

Category
ಕರಾವಳಿ ತರಂಗಿಣಿ