ಕೊಲಂಬೊ : ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹೊಸ ಇತಿಹಾಸ ಬರೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ 50 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ಭಾರತ ಹಾಗೂ ಏಷ್ಯಾದ ಮೊದಲ ಆಟಗಾರ ಎಂಬ ಅಪರೂಪದ ಹೆಗ್ಗಳಿಕೆಗೆ ಜಡ್ಡು ಪಾತ್ರರಾಗಿದ್ದಾರೆ.
2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜಡೇಜಾ, 2019ರಲ್ಲಿ WTC ಆರಂಭವಾದಂದಿನಿಂದ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಆಲ್ರೌಂಡರ್ ಆಗಿ ಸುದೀರ್ಘ ಕೊಡುಗೆ ನೀಡುತ್ತಾ ಬಂದಿದ್ದಾರೆ. ಚೊಚ್ಚಲ 2019-21ರ ಸೀಸನ್‌ನಲ್ಲಿ 11 ಪಂದ್ಯ, 2021-23ರ ಅವಧಿಯಲ್ಲಿ 13 ಪಂದ್ಯ, 2023-25ರಲ್ಲಿ 25 ಪಂದ್ಯ ಹಾಗೂ ಪ್ರಸ್ತುತ 2025-27ರ ಆವೃತ್ತಿಯಲ್ಲಿ 11 ಪಂದ್ಯಗಳನ್ನು ಆಡುವ ಮೂಲಕ 50 ಪಂದ್ಯಗಳ ಗಡಿ ತಲುಪಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 5 ಶತಕ ಸೇರಿದಂತೆ 2,632 ರನ್ ಗಳಿಸಿರುವ ಜಡೇಜಾ, ಬೌಲಿಂಗ್‌ನಲ್ಲಿ 160 ವಿಕೆಟ್ ಕಬಳಿಸಿದ್ದಾರೆ. WTCಯಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದ ಭಾರತೀಯರ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, 47 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ ದ್ವಿತೀಯ ಹಾಗೂ 46 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಪಂದ್ಯದ ವಿಷಯಕ್ಕೆ ಬಂದರೆ, ಶ್ರೀಲಂಕಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಶುಭ್‌ಮನ್ ಗಿಲ್ ಪಡೆ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ. ದೇವದತ್ ಪಡಿಕ್ಕಲ್ ಬಾರಿಸಿದ ಸತತ ಎರಡನೇ ಭರ್ಜರಿ ಶತಕ (117), ನಾಯಕ ಗಿಲ್ (50) ಮತ್ತು ರಿಷಭ್ ಪಂತ್ (63) ಅವರ ಅರ್ಧಶತಕ ಹಾಗೂ ಧ್ರುವ್ ಜುರೆಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ (89*) ನೆರವಿನಿಂದ ಭಾರತ ತಂಡ 131 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 469 ರನ್ ಸಿಡಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.