ಲಂಡನ್ : ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 118 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ ಭಾರತದ ಮಿಕ್ಸ್‌ಡ್ ಡಿಸಾಬಿಲಿಟಿ ಕ್ರಿಕೆಟ್ ತಂಡ, 2002ರಲ್ಲಿ ಸೌರವ್ ಗಂಗೂಲಿ ಮಾಡಿದ ಪ್ರಸಿದ್ಧ ಬಾಲ್ಕನಿ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿದೆ. ಪಂದ್ಯ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರರು ಲಾರ್ಡ್ಸ್‌ನ ಪ್ರಸಿದ್ಧ ಬಾಲ್ಕನಿಯಲ್ಲಿ ಜಮಾಯಿಸಿ ತಮ್ಮ ಬ್ಲೇಜರ್ ಹಾಗೂ ಟಿ-ಶರ್ಟ್‌ಗಳನ್ನು ಗಾಳಿಯಲ್ಲಿ ಬೀಸುತ್ತಾ, ತ್ರಿವರ್ಣ ಧ್ವಜದೊಂದಿಗೆ ಜಯಘೋಷ ಮೊಳಗಿಸಿದರು. ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (DCCI) ಹಂಚಿಕೊಂಡಿರುವ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದೆ.
ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ಅರ್ಜುನ್ ಗಾವ್ರೆ 44 ಎಸೆತಗಳಲ್ಲಿ 68 ರನ್ ಬಾರಿಸಿದರೆ, ನಾಯಕ ಮಜೀದ್ ಮಗ್ರಾಯ್ ಬಿರುಗಾಳಿ ಬ್ಯಾಟಿಂಗ್ ನಡೆಸಿ ಕೇವಲ 19 ಎಸೆತಗಳಲ್ಲಿ ಅಜೇಯ 63 ರನ್ ಚಚ್ಚಿದರು. 207 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಭಾರತದ ಮಾರಕ ಬೌಲಿಂಗ್‌ಗೆ ತತ್ತರಿಸಿ ಕೇವಲ 88 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹಿಲಾಲ್ ಅಹ್ಮದ್ ವಾನಿ 21 ರನ್ ನೀಡಿ 4 ವಿಕೆಟ್ ಹಾಗೂ ಜಯೇಶ್ ಪರ್ಮಾರ್ 3 ವಿಕೆಟ್ ಕಸಿದು ಇಂಗ್ಲೆಂಡ್ ಆಟಕ್ಕೆ ತೆರೆ ಎಳೆದರು. ಈ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದರೂ, ಒಟ್ಟಾರೆ 7 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-3 ಅಂತರದಿಂದ ಕೈವಶ ಮಾಡಿಕೊಂಡಿತು.
ದೈಹಿಕ ವಿಕಲಚೇತನರು, ಶ್ರವಣದೋಷವುಳ್ಳವರು ಮತ್ತು ಕಲಿಕಾ ನ್ಯೂನತೆ ಹೊಂದಿರುವ ಆಟಗಾರರನ್ನು ಒಳಗೊಂಡ ಈ ಮಿಕ್ಸ್‌ಡ್ ಡಿಸಾಬಿಲಿಟಿ ತಂಡವು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಪ್ರದರ್ಶಿಸಿದ ಈ ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. ಕ್ರಿಕೆಟ್‌ನ ಕಾಶಿ ಎಂದೇ ಪ್ರಸಿದ್ಧವಾದ ಮೈದಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು, 24 ವರ್ಷಗಳ ನಂತರ 'ದಾದಾ' ಶೈಲಿಯ ಸಂಭ್ರಮ ಮರುಕಳಿಸುವಂತೆ ಮಾಡಿದ ಈ ವೀರ ಆಟಗಾರರ ಸಾಧನೆಗೆ ದೇಶದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.