image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ಸ್: ಪ್ರಿಕ್ವಾರ್ಟರ್‌ಗೆ ಸಿಂಧು, ಆಯುಷ್; ಲಕ್ಷ್ಯ ಸೇನ್‌ಗೆ ಸೋಲು

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ಸ್: ಪ್ರಿಕ್ವಾರ್ಟರ್‌ಗೆ ಸಿಂಧು, ಆಯುಷ್; ಲಕ್ಷ್ಯ ಸೇನ್‌ಗೆ ಸೋಲು

ನವದೆಹಲಿ : ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‍ಶಿಪ್ಸ್‌ನಲ್ಲಿ ಭಾರತದ ಆಯುಷ್ ಶೆಟ್ಟಿ ಮತ್ತು ಪಿ.ವಿ. ಸಿಂಧು ಅಂತಿಮ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರೆ, ಲಕ್ಷ್ಯ ಸೇನ್ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ 22ನೇ ವಿಶ್ವ ರ್ಯಾಂಕಿಂಗ್‌ನ 21 ವರ್ಷದ ಆಯುಷ್ ಶೆಟ್ಟಿ ಕೇವಲ 26 ನಿಮಿಷಗಳಲ್ಲಿ 87ನೇ ರ್ಯಾಂಕಿಂಗ್‌ನ ಶ್ರೀಲಂಕಾದ ದುಮಿಂದು ಅಬೇವಿಕ್ರಮರನ್ನು 21-8, 21-10 ಗೇಮ್‌ಗಳಿಂದ ಸುಲಭವಾಗಿ ಮಣಿಸಿದರು. ತಮ್ಮ ಚೊಚ್ಚಲ ವಿಶ್ವ ಚಾಂಪಿಯನ್‍ಶಿಪ್ಸ್ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೀನಾದ ಶಿ ಯು ಕಿ ಅವರಿಗೆ ಆಘಾತ ನೀಡಿದ್ದ ಆಯುಷ್, ಕ್ವಾರ್ಟರ್‌ಫೈನಲ್ ಪ್ರವೇಶಿಸಲು 11ನೇ ಶ್ರೇಯಾಂಕದ ಇಂಡೋನೇಷ್ಯದ ಅಲ್ವಿ ಫರ್ಹಾನ್ ಅವರನ್ನು ಎದುರಿಸಲಿದ್ದಾರೆ. ಇದು 2023ರ ವಿಶ್ವ ಜೂನಿಯರ್ ಚಾಂಪಿಯನ್‍ಶಿಪ್ಸ್ ಸೆಮಿಫೈನಲ್ ಪಂದ್ಯದ ಮರುಹೋರಾಟವಾಗಲಿದೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 31 ವರ್ಷದ ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು, ಕೆನಡಾದ 49ನೇ ರ್ಯಾಂಕಿಂಗ್‌ನ ವೆನ್ ಯು ಜಾಂಗ್ ವಿರುದ್ಧ 21-16, 21-17 ನೇರ ಗೇಮ್‌ಗಳಿಂದ 34 ನಿಮಿಷಗಳಲ್ಲಿ ಜಯಗಳಿಸಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಈ ಗೆಲುವಿನೊಂದಿಗೆ ಸಿಂಧು ಕೆನಡಾ ಆಟಗಾರ್ತಿಯ ವಿರುದ್ಧ ತಮ್ಮ ಮುಖಾಮುಖಿ ದಾಖಲೆಯನ್ನು 3-0ಗೆ ಹೆಚ್ಚಿಸಿಕೊಂಡಿದ್ದಾರೆ.

ಮತ್ತೊಂದೆಡೆ, 14ನೇ ಶ್ರೇಯಾಂಕದ ಭಾರತದ ಲಕ್ಷ್ಯ ಸೇನ್‌ಗೆ ಎರಡನೇ ಸುತ್ತಿನಲ್ಲಿ ಹಿನ್ನಡೆಯಾಗಿದೆ. 2021ರ ಆವೃತ್ತಿಯ ಕಂಚಿನ ಪದಕ ವಿಜೇತ ಸೇನ್, ತಮ್ಮ ಮೊದಲ ವಿಶ್ವ ಚಾಂಪಿಯನ್‍ಶಿಪ್ಸ್ ಆಡುತ್ತಿರುವ ಅಮೆರಿಕದ 18 ವರ್ಷದ ಹಾಗೂ 92ನೇ ರ್ಯಾಂಕಿಂಗ್‌ನ ಗ್ಯಾರೆಟ್ ಟಾನ್ ವಿರುದ್ಧ 19-21, 21-19, 21-17 ಗೇಮ್‌ಗಳಿಂದ ಪರಾಭವಗೊಂಡರು. 73 ನಿಮಿಷಗಳ ಕಾಲ ನಡೆದ ಈ ರೋಚಕ ಹಣಾಹಣಿಯಲ್ಲಿ ಸೇನ್ ತೀವ್ರ ಹೋರಾಟ ನೀಡಿದರೂ, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಟಾನ್ ಗೆಲುವು ಸಾಧಿಸಿದರು.

Category
ಕರಾವಳಿ ತರಂಗಿಣಿ