ಗಾಲೆ: ಭಾರತ ಕ್ರಿಕೆಟ್ ತಂಡವು ಗಾಲೆ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ ತನ್ನ 600ನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಹೊಸ ಇತಿಹಾಸ ಬರೆದಿದೆ. 1932ರ ಜೂನ್ 25ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕರ್ನಲ್ ಕೊಟ್ಟಾರಿ ಕನಕಯ್ಯ ನಾಯುಡು (ಸಿ.ಕೆ. ನಾಯುಡು) ಅವರ ನೇತೃತ್ವದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯನ್ನಾಡಿದ್ದ ಭಾರತ, 94 ವರ್ಷಗಳ ಸುದೀರ್ಘ ಪಯಣದ ನಂತರ ಈ ಅಪರೂಪದ ಮೈಲಿಗಲ್ಲು ತಲುಪಿದೆ. ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ನಂತರ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡ ಎನಿಸಿಕೊಂಡಿದೆ. ಭಾರತವು ತನ್ನ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ವಿಶೇಷ ಸಂದರ್ಭದಲ್ಲೇ ಈ ಚಾರಿತ್ರಿಕ ಸಾಧನೆ ಮೂಡಿಬಂದಿದೆ.
ಭಾರತದ ಟೆಸ್ಟ್ ಇತಿಹಾಸದಲ್ಲಿ ಈವರೆಗೆ ಒಟ್ಟು 319 ಆಟಗಾರರು ಭಾರತದ ಟೆಸ್ಟ್ ಕ್ಯಾಪ್ ಧರಿಸಿದ್ದು, ಮಾನವ್ ಸುಥಾರ್ ಅವರು ತಂಡಕ್ಕೆ ಸೇರ್ಪಡೆಗೊಂಡ ಹೊಸ ಆಟಗಾರರಾಗಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ಅತಿ ಹೆಚ್ಚು (200) ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. ಕರ್ನಲ್ ಸಿ.ಕೆ. ನಾಯುಡು ಅವರಿಂದ ಹಿಡಿದು ರಿಷಭ್ ಪಂತ್ ಅವರವರೆಗೆ 94 ವರ್ಷಗಳಲ್ಲಿ ಒಟ್ಟು 38 ಆಟಗಾರರು ಭಾರತೀಯ ಪುರುಷರ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದು, 2014ರಿಂದ 2022ರ ತನಕ 68 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 40 ಪಂದ್ಯಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ಇದಕ್ಕೂ ಮುನ್ನ, ಭಾರತ ತನ್ನ 500ನೇ ಟೆಸ್ಟ್ ಪಂದ್ಯವನ್ನು 2016ರ ಸೆಪ್ಟೆಂಬರ್ 22 ರಿಂದ 26ರವರೆಗೆ ಕಾನ್ಪುರದ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿತ್ತು. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲೇ ನಡೆದಿದ್ದ ಆ ಪಂದ್ಯದಲ್ಲಿ ಭಾರತ ತಂಡವು 197 ರನ್‌ಗಳ ಭವ್ಯ ಜಯ ಸಾಧಿಸಿತ್ತು. ಇದೀಗ ಗಾಲೆ ಸ್ಟೇಡಿಯಂನಲ್ಲಿ 600ನೇ ಪಂದ್ಯವಾಡುವ ಮೂಲಕ ಭಾರತೀಯ ಕ್ರಿಕೆಟ್ ಮತ್ತೊಂದು ಹೊಸ ಅಧ್ಯಾಯ ಬರೆದಿದೆ.