ಅಮೇರಿಕ : ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ 24 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಎರಡನೇ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ. 2 ಗಂಟೆ 44 ನಿಮಿಷಗಳ ಕಾಲ ನಡೆದ ತೀವ್ರ ಕಾದಾಟದಲ್ಲಿ ಅರ್ಜೆಂಟೀನಾದ 25 ವರ್ಷದ ಆಟಗಾರ ಹಾಗೂ ವಿಶ್ವದ 50ನೇ ಶ್ರೇಯಾಂಕದ ಥಿಯಾಗೊ ಅಗಸ್ಟಿನ್ ಟಿರಾಂಟೆ 2-6, 6-4, 6-4 ಸೆಟ್‌ಗಳಿಂದ ಜೊಕೊವಿಕ್ ಅವರನ್ನು ಪರಾಭವಗೊಳಿಸಿದರು.
ಪಂದ್ಯದ ಆರಂಭಿಕ ಸೆಟ್‌ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದ ಜೊಕೊವಿಕ್ 6-2 ಅಂತರದಿಂದ ಸುಲಭ ಗೆಲುವು ಪಡೆದಿದ್ದರು. ಆದರೆ ಎರಡನೇ ಸೆಟ್‌ನಲ್ಲಿ ಕಠಿಣ ವಾತಾವರಣ, ತೀವ್ರ ಬೇಸಿಗೆ ಹಾಗೂ ಡಿಹೈಡ್ರೇಷನ್‌ನಿಂದಾಗಿ ಕೋರ್ಟ್‌ನಲ್ಲೇ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ತಕ್ಷಣ ವೈದ್ಯಕೀಯ ನೆರವು ಪಡೆದು ಪಂದ್ಯ ಮುಂದುವರಿಸಿದರೂ, ಜೊಕೊವಿಕ್ ಅವರಿಗೆ ತಮ್ಮ ಪೂರ್ಣ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡ ಟಿರಾಂಟೆ ಮುಂದಿನ ಎರಡೂ ಸೆಟ್‌ಗಳನ್ನು ವಶಪಡಿಸಿಕೊಂಡು ತಮ್ಮ ವೃತ್ತಿಜೀವನದ ದೊಡ್ಡ ಗೆಲುವು ಸಾಧಿಸಿದರು.
ವಿಂಬಲ್ಡನ್ ಸೆಮಿಫೈನಲ್ ನಂತರ ಮೊದಲ ಬಾರಿಗೆ ಅಖಾಡಕ್ಕಿಳಿದಿದ್ದ ಮೂರು ಬಾರಿಯ ಸಿನ್ಸಿನಾಟಿ ಚಾಂಪಿಯನ್ ಜೊಕೊವಿಕ್ ಅವರಿಗೆ ಈ ಸೋಲು ದೊಡ್ಡ ಹಿನ್ನಡೆಯಾಗಿದೆ. ಆಗಸ್ಟ್ 30 ರಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿರುವ ಯುಎಸ್ ಓಪನ್‌ನಲ್ಲೂ ತೀವ್ರ ಬಿಸಿಲ ವಾತಾವರಣ ಇರಲಿದ್ದು, ಜೊಕೊವಿಕ್ ದೈಹಿಕವಾಗಿ ಅಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.