image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿ

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಪದವಿ ಪೂರ್ವ ಕಾಲೇಜು ಮಟ್ಟದ 'ಸ್ವಾತಂತ್ರ್ಯೋತ್ಸವ ಟೂರ್ನಮೆಂಟ್ 2026' ಪುರುಷರ ಕಬಡ್ಡಿ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯು ಆಗಸ್ಟ್ 13 ರಂದು ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 16ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಮತ್ತು 8 ಥ್ರೋಬಾಲ್ ತಂಡಗಳು ಭಾಗವಹಿಸಿದ್ದವು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆ. ಫಾ. ಫೌಸ್ಟಿನ್ ಲೂಕಾಸ್ ಲೋಬೋ ವಹಿಸಿದ್ದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ರೆ. ಡಾ. ಮೈಕೆಲ್ ಸಂತುಮಾಯೋರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರಶೇಖರ ಎಸ್. ಎನ್. ಕಾರ್ಯಕ್ರಮ ನಿರೂಪಿಸಿದರು.

ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಗೋವಿಂದ ದಾಸ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡರೆ, ಡಾ. ಎನ್. ಎಸ್. ಎ. ಎಮ್. ಪಿಯು ಕಾಲೇಜು ದ್ವಿತೀಯ, ಪಾಡುವ ಪಿಯು ಕಾಲೇಜು ತೃತೀಯ ಹಾಗೂ ಮಿಲಾಗ್ರೇಸ್ ಪಿಯು ಕಾಲೇಜು ನಾಲ್ಕನೇ ಸ್ಥಾನ ಗಳಿಸಿದವು. ವೈಯಕ್ತಿಕ ವಿಭಾಗದಲ್ಲಿ ಡಾ. ನಿಟ್ಟೆ ಪಿಯು ಕಾಲೇಜಿನ ಸೃಷ್ಟಿ ಜೈನ್ 'ಸರಣಿ ಶ್ರೇಷ್ಠ', ಗೋವಿಂದ ದಾಸ ಕಾಲೇಜಿನ ಅಮೂಲ್ಯ 'ಶ್ರೇಷ್ಠ ಸರ್ವರ್' ಮತ್ತು ಶಾನ್ವಿ ಶೆಟ್ಟಿ 'ಅತ್ಯುತ್ತಮ ಆಲ್ ರೌಂಡರ್' ಪ್ರಶಸ್ತಿ ಪಡೆದರು.

ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಸೆಬಾಸ್ಟಿಯನ್ ಪಿಯು ಕಾಲೇಜು ಪ್ರಥಮ ಸ್ಥಾನ ಗಳಿಸಿದರೆ, ಬಿ.ಇ.ಎಮ್. ಪಿಯು ಕಾಲೇಜು ದ್ವಿತೀಯ, ಬೋಸ್ಕೋಸ್ ಪಿಯು ಕಾಲೇಜು ತೃತೀಯ ಹಾಗೂ ರಾಮಕೃಷ್ಣ ಪಿಯು ಕಾಲೇಜು ನಾಲ್ಕನೇ ಸ್ಥಾನ ಪಡೆದವು. ವೈಯಕ್ತಿಕ ವಿಭಾಗದಲ್ಲಿ ಸೆಬಾಸ್ಟಿಯನ್ ಕಾಲೇಜಿನ ಅಫೀಫ್ 'ಶ್ರೇಷ್ಠ ರೈಡರ್', ಅಲೀಶಾನ್ 'ಶ್ರೇಷ್ಠ ಕ್ಯಾಚರ್' ಹಾಗೂ ಬಿ.ಇ.ಎಮ್. ಕಾಲೇಜಿನ ರಂಜಿತ್ 'ಅತ್ಯುತ್ತಮ ಆಲ್ ರೌಂಡರ್' ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪಂದ್ಯಾವಳಿಯ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಯೋಜನಾ ಅಧ್ಯಕ್ಷರಾದ ರೆ. ಡಾ. ಮೈಕೆಲ್ ಸಂತುಮಾಯೋರ್ ಅವರು ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಿ ಶುಭ ಕೋರಿದರು.

Category
ಕರಾವಳಿ ತರಂಗಿಣಿ