ನವದೆಹಲಿ: ದೇಶಾದ್ಯಂತ ಲಕ್ಷಾಂತರ ರೈತರಿಗೆ ಕೇಂದ್ರ ಸರ್ಕಾರ ಬೃಹತ್ ಸಿಹಿ ಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯನ್ನು ಮುಂದಿನ ಐದು ವರ್ಷಗಳ ಕಾಲ, ಅಂದರೆ 2030-31ರ ಆರ್ಥಿಕ ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಐದು ವರ್ಷಗಳ ಅವಧಿಗಾಗಿ ಒಟ್ಟು 3,15,614 ಕೋಟಿ ರೂ.ಗಳ ಬೃಹತ್ ಬಜೆಟ್ ವೆಚ್ಚವನ್ನು ಕಾಯ್ದಿರಿಸಲಾಗಿದೆ. ಈ ಯೋಜನೆಯು 2026-27ರ ಹಣಕಾಸು ವರ್ಷದಿಂದ 2030-31ರವರೆಗೆ ಜಾರಿಯಲ್ಲಿರುತ್ತದೆ. ಸಂಪುಟ ಸಭೆಯ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಈ ಯೋಜನೆಯ ಮೂಲಕ ದೇಶದ ಅರ್ಹ ರೈತರು ಮೊದಲಿನಂತೆಯೇ ಸಕಾಲದಲ್ಲಿ ಮತ್ತು ಪಾರದರ್ಶಕವಾಗಿ ಆರ್ಥಿಕ ನೆರವು ಪಡೆಯುವುದನ್ನು ಸರ್ಕಾರ ಖಚಿತಪಡಿಸಿದೆ ಎಂದಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ.ಗಳ ಆರ್ಥಿಕ ಸಹಾಯಧನ ಲಭ್ಯವಾಗಲಿದೆ. ಈ ಮೊತ್ತವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಬೆಳೆ ಚಕ್ರಕ್ಕೆ ಅನುಗುಣವಾಗಿ ಬಿತ್ತನೆ ಹಾಗೂ ಕೃಷಿ ತಯಾರಿಯ ಸಂದರ್ಭದಲ್ಲೇ ಹಣ ಸಿಗುವಂತೆ ಕಂತುಗಳನ್ನು ನಿಗದಿಪಡಿಸಲಾಗಿದೆ. ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಖರೀದಿಸಲು ಹೆಚ್ಚಿನ ಹಣದ ಅಗತ್ಯವಿರುವ ಸಮಯದಲ್ಲೇ ಯೋಜನೆಯ ಕಂತುಗಳು ಬಿಡುಗಡೆಯಾಗಲಿವೆ. ಇದರಿಂದ ರೈತರ ಹಣಕಾಸಿನ ಕೊರತೆ ನೀಗುವುದಲ್ಲದೆ, ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವ ದುಸ್ಥಿತಿ ತಪ್ಪಲಿದೆ.
ಯೋಜನೆಯ ಗರಿಷ್ಠ ಲಾಭವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲುಪುತ್ತಿದೆ. 2019 ರಲ್ಲಿ ಯೋಜನೆಯು ಆರಂಭಗೊಂಡಂದಿನಿಂದ ಇದುವರೆಗೆ ಒಟ್ಟು 23 ಕಂತುಗಳ ಮೂಲಕ 4.47 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ನೀತಿ ಆಯೋಗದ ಅಂದಾಜಿನ ಪ್ರಕಾರ, ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸಿದೆ ಹಾಗೂ ಅನೌಪಚಾರಿಕ ಸಾಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ. ಹೀಗಾಗಿ ಯೋಜನೆಯನ್ನು ಮತ್ತಷ್ಟು 5 ವರ್ಷ ವಿಸ್ತರಿಸಿರುವುದು ಕೃಷಿಕ ವಲಯಕ್ಕೆ ಅತ್ಯಂತ ದೊಡ್ಡ ಆಸರೆಯಾಗಿ ಪರಿಣಮಿಸಿದೆ.