image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಬಳ್ಳಾರಿಯಲ್ಲಿ ಮುಂಗಾರು ಬಿತ್ತನೆ ಚುರುಕು: ಬೀಜಕ್ಕಾಗಿ ರೈತರ ಪರದಾಟ, ಕೃಷಿ ಇಲಾಖೆಯಿಂದ ಕಠಿಣ ಕ್ರಮದ ಎಚ್ಚರಿಕೆ

ಬಳ್ಳಾರಿಯಲ್ಲಿ ಮುಂಗಾರು ಬಿತ್ತನೆ ಚುರುಕು: ಬೀಜಕ್ಕಾಗಿ ರೈತರ ಪರದಾಟ, ಕೃಷಿ ಇಲಾಖೆಯಿಂದ ಕಠಿಣ ಕ್ರಮದ ಎಚ್ಚರಿಕೆ

ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿರುವ ಬೆನ್ನಲ್ಲೇ ಬಿತ್ತನೆ ಬೀಜದ ಕೊರತೆ ಎದುರಾಗಿದ್ದು, ರೈತರು ಬೀಜ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಬಿತ್ತನೆ ಬೀಜ ಮಾರಾಟ ಕೇಂದ್ರಗಳ ಎದುರು ರೈತರು ತಮ್ಮ ಚಪ್ಪಲಿಗಳನ್ನು ಸರತಿಯಲ್ಲಿ ಇಟ್ಟು ಗಂಟೆಗಟ್ಟಲೆ ಕಾಯುವ ದೃಶ್ಯಗಳು ಕಂಡುಬಂದವು. ಮುಂಜಾನೆಯಿಂದಲೇ ರೈತರು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಕಚೇರಿ ಬಾಗಿಲು ತೆರೆಯುವ ಮುನ್ನವೇ ಸರತಿಯಲ್ಲಿ ಚಪ್ಪಲಿಗಳನ್ನು ಇಟ್ಟು ತಮ್ಮ ಸ್ಥಾನ ಕಾಯ್ದುಕೊಂಡು ಬೀಜಕ್ಕಾಗಿ ಕಾದರು. ಆದರೆ, ಇಷ್ಟಾದರೂ ಎಲ್ಲ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಬೀಜ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಹಾಗೂ ತೊಗರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರ ನಡುವೆಯೇ ಬಿತ್ತನೆ ಬೀಜಗಳ ಬೆಲೆ ಏರಿಕೆಯೂ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ತೊಗರಿ ಬಿತ್ತನೆ ಬೀಜದ ಬೆಲೆ ಪ್ರತಿ ಕೆ.ಜಿಗೆ ₹200ಕ್ಕೆ ತಲುಪಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ₹150 ಇತ್ತು ಎಂದು ರೈತರು ತಿಳಿಸಿದ್ದಾರೆ. ಮುಂಗಾರು ಬಿತ್ತನೆ ಅವಧಿಯಲ್ಲಿ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಸಿ, ಕೃತಕ ಅಭಾವ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ರೈತರು ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಮರ್ಪಕವಾಗಿದ್ದು, ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾದ್ಯಂತ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಅಧಿಕೃತ ಮಾರಾಟಗಾರರ ಬಳಿ ಅಗತ್ಯ ಪ್ರಮಾಣದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಡಲಾಗಿದೆ.

ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲು ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಕೇಂದ್ರಗಳಲ್ಲಿ ದಾಸ್ತಾನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೊರತೆಯಾಗದಂತೆ ನಿರಂತರ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅಥವಾ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Category
ಕರಾವಳಿ ತರಂಗಿಣಿ