image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಮನೆ ಬಾಗಿಲಿಗೇ ಬರಲಿದೆ ತಾಜಾ ಮಾವು : ಹಾಪ್‌ಕಾಮ್ಸ್‌ ಹಾಗೂ ಅಂಚೆ ಇಲಾಖೆಯಿಂದ 'ರೈತರ ಅಂಚೆ' ಯೋಜನೆಗೆ ಚಾಲನೆ

ಮನೆ ಬಾಗಿಲಿಗೇ ಬರಲಿದೆ ತಾಜಾ ಮಾವು : ಹಾಪ್‌ಕಾಮ್ಸ್‌ ಹಾಗೂ ಅಂಚೆ ಇಲಾಖೆಯಿಂದ 'ರೈತರ ಅಂಚೆ' ಯೋಜನೆಗೆ ಚಾಲನೆ

ಬೆಂಗಳೂರು : ಬೆಂಗಳೂರಿನ ಮಾವು ಪ್ರಿಯರಿಗೆ ಹಾಪ್‌ಕಾಮ್ಸ್‌ ಮತ್ತು ಭಾರತೀಯ ಅಂಚೆ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ (ಮೇ 30) ತಾಜಾ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೇ ನೇರವಾಗಿ ತಲುಪಿಸುವ ನೂತನ ಡೋರ್‌ಡೆಲಿವರಿ ಸೇವೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಗ್ರಾಹಕರು ಆನ್‌ಲೈನ್ ಮೂಲಕ ಸುಲಭವಾಗಿ ಆರ್ಡರ್ ಮಾಡಿದ ಕೇವಲ 24 ಗಂಟೆಯೊಳಗೆ ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನು ತಮ್ಮದಾಗಿಸಿಕೊಳ್ಳಬಹುದು. ರಾಜಭವನ ರಸ್ತೆಯಲ್ಲಿರುವ ಅಂಚೆ ಇಲಾಖೆಯ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯ ಪೋಸ್ಟ್‌ಮಾಸ್ಟರ್‌ ಜನರಲ್‌ ಕೆ.ಪ್ರಕಾಶ್‌ ಅವರು ಈ 'ರೈತರ ಅಂಚೆ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ರೈತರಿಂದ ನೇರವಾಗಿ ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾವು ಮೇಳ ಚಾಲ್ತಿಯಲ್ಲಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಆಲ್ಫಾನ್ಸ್‌, ಬನೇಶನ್‌, ದಶೇರಿ, ಇಮಾಮ್‌ ಪಸಂದ್‌, ಕೇಸರ್‌, ಮಲ್ಲಿಕಾ, ಮಲಗೋವ, ರಸಪುರಿ, ಸೆಂಧೂರ ಮತ್ತು ತೋತಾಪುರಿ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ತಳಿಯ ಉತ್ಕೃಷ್ಟ ಮಾವಿನ ಹಣ್ಣುಗಳು ಖರೀದಿಗೆ ಲಭ್ಯವಿವೆ. ಗ್ರಾಹಕರು ಹಾಪ್‌ಕಾಮ್ಸ್‌ನ ಅಧಿಕೃತ ವೆಬ್‌ಸೈಟ್‌ (https://hopcomsbengaluru.com) ನಲ್ಲಿ ನೋಂದಣಿ ಮಾಡಿಕೊಂಡು, ಆನ್‌ಲೈನ್ ಮೂಲಕ ಹಣ ಪಾವತಿಸಿ ತಮಗೆ ಬೇಕಾದ ತಳಿಯ ಹಣ್ಣುಗಳನ್ನು ಕಾಯ್ದಿರಿಸಬಹುದಾಗಿದೆ.

ಈ ಯೋಜನೆಯಡಿ ಗ್ರಾಹಕರು ಕನಿಷ್ಠ 3 ಕೆಜಿ ಮಾವಿನ ಹಣ್ಣನ್ನು ಖರೀದಿಸುವುದು ಕಡ್ಡಾಯವಾಗಿದ್ದು, ಸದ್ಯಕ್ಕೆ 3 ಕೆಜಿ ಮತ್ತು 5 ಕೆಜಿಯ ಬಾಕ್ಸ್‌ಗಳಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ವಿತರಿಸಲಾಗುತ್ತಿದೆ. ಅಂಚೆ ಶುಲ್ಕವನ್ನು ಒಳಗೊಂಡಂತೆ 3 ಕೆಜಿ ತೂಕದ ಬಾಕ್ಸ್‌ಗಳ ದರ ಪಟ್ಟಿ ಈ ಕೆಳಗಿನಂತಿದೆ:

 * ತೋತಾಪುರಿ: 177 ರೂ.

 * ಸೆಂಧೂರ: 222 ರೂ.

 * ರಸಪುರಿ: 321 ರೂ.

 * ಮಲ್ಲಿಕಾ: 330 ರೂ.

 * ಬನೇಶನ್‌: 336 ರೂ.

 * ದಶೇರಿ: 378 ರೂ.

 * ಅಲ್ಫಾನ್ಸ್‌: 396 ರೂ.

 * ಕೇಸರ್‌: 564 ರೂ.

 * ಮಲಗೋವ: 651 ರೂ.

 * ಇಮಾಮ್‌ಪಸಂದ್‌: 765 ರೂ.

ಇನ್ನು 5 ಕೆಜಿ ತೂಕದ ಮಾವಿನ ಹಣ್ಣಿನ ಬಾಕ್ಸ್‌ಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ ಕೇವಲ ಮಾವಿನ ಹಣ್ಣುಗಳನ್ನು ಮಾತ್ರ ಅಂಚೆ ಇಲಾಖೆಯ ಮೂಲಕ ಆನ್‌ಲೈನ್‌ನಲ್ಲಿ ವಿತರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಸ್ಪಂದನೆಯನ್ನು ಆಧರಿಸಿ ತಾಜಾ ತರಕಾರಿಗಳನ್ನೂ ಸಹ ಇದೇ ಮಾದರಿಯಲ್ಲಿ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸೌಲಭ್ಯವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹಾಪ್‌ಕಾಮ್ಸ್‌ ಮಾರುಕಟ್ಟೆ ವ್ಯವಸ್ಥಾಪಕ ವಿನಾಯಕ್‌ ಅವರು ಮಾಹಿತಿ ನೀಡಿದ್ದಾರೆ. ಇನ್ನು ತಡ ಮಾಡದೆ ವೆಬ್‌ಸೈಟ್‌ಗೆ ಭೇಟಿ ನೀಡಿ, ರಾಸಾಯನಿಕ ಮುಕ್ತ ತಾಜಾ ಮಾವಿನ ಹಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಿ.

Category
ಕರಾವಳಿ ತರಂಗಿಣಿ