ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳ ಲಭ್ಯತೆಯಲ್ಲಿ ಯಾವುದೇ ಕೊರತೆಯಿಲ್ಲ ಹಾಗೂ ರೈತರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ. ಪ್ರಸಕ್ತ 2026ರ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷಕ್ಕೆ ಸೋಯಾಬೀನ್‌ಗೆ 8,960 ಕ್ವಿಂಟಾಲ್ ಹಾಗೂ ಶೇಂಗಾ (ನೆಲಗಡಲೆ) ಬೀಜಕ್ಕೆ 1,344 ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದ್ದು, ಅದರನುಸಾರ ಈಗಾಗಲೇ 2,733 ಕ್ವಿಂಟಾಲ್ ಸೋಯಾಬೀನ್ ಹಾಗೂ 305 ಕ್ವಿಂಟಾಲ್ ಶೇಂಗಾ ಬೀಜವನ್ನು ದಾಸ್ತಾನು ಮಾಡಲಾಗಿದೆ. ಉಳಿದ ಬೇಡಿಕೆಯನ್ನು ರವಾನೆ (Consignment) ಆಧಾರದಲ್ಲಿ ಪೂರೈಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇನ್ನು ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್ ಬೀಜಕ್ಕೆ 1.80 ಲಕ್ಷ ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದ್ದು, ಅದಕ್ಕಿಂತ ಹೆಚ್ಚಾಗಿ ಅಂದರೆ 2.09 ಲಕ್ಷ ಕ್ವಿಂಟಾಲ್ ಬೀಜ ಲಭ್ಯವಿದೆ. ಅದೇ ರೀತಿ ನೆಲಗಡಲೆ ಬೀಜಕ್ಕೆ 0.70 ಲಕ್ಷ ಕ್ವಿಂಟಾಲ್ ಬೇಡಿಕೆ ಎದುರು 0.74 ಲಕ್ಷ ಕ್ವಿಂಟಾಲ್ ದಾಸ್ತಾನಿದೆ. ಒಟ್ಟಾರೆ ಇಡೀ ರಾಜ್ಯದಲ್ಲಿ ಎಲ್ಲಾ ಬೆಳೆಗಳಿಗೆ ಸೇರಿ ಒಟ್ಟು 4.71 ಲಕ್ಷ ಕ್ವಿಂಟಾಲ್ ಬೇಡಿಕೆ ಇದ್ದು, ಇದಕ್ಕೆ ಅನುಗುಣವಾಗಿ 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಇಲಾಖೆ ಅಂಕಿ-ಅಂಶಗಳನ್ನು ನೀಡಿದೆ.
ರೈತ ಸಂಪರ್ಕ ಕೇಂದ್ರಗಳ ಮೂಲಕ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಅರ್ಹ ರೈತರಿಗೆ ಅತ್ಯಂತ ಪಾರದರ್ಶಕವಾಗಿ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ವಾಡಿಕೆಗಿಂತ 500 ಪಟ್ಟು ಹೆಚ್ಚು ಮುಂಗಾರು ಪೂರ್ವ ಮಳೆಯಾಗಿರುವುದರಿಂದ ಈಗಾಗಲೇ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ 8 ತಾಲೂಕುಗಳ ಕೃಷಿ ಕೇಂದ್ರಗಳು, ರೈತ ಸೊಸೈಟಿ ಮತ್ತು ಹೋಬಳಿ ಕೇಂದ್ರಗಳಲ್ಲಿ ಸೋಯಾಬಿನ್, ಶೇಂಗಾ, ಭತ್ತ, ರಾಗಿ, ಮೆಕ್ಕೆಜೋಳ ಸೇರಿದಂತೆ ಹಲವು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿದೆ. ಬಿತ್ತನೆ ಬೀಜಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.