image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 89,999 ರೂ. ಹಾಗೂ ಕಡ್ಡಿ ಮೆಣಸಿನಕಾಯಿ 69,999 ರೂ. ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ

ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 89,999 ರೂ. ಹಾಗೂ ಕಡ್ಡಿ ಮೆಣಸಿನಕಾಯಿ 69,999 ರೂ. ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ

ಬ್ಯಾಡಗಿ : ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 89,999 ರೂ. ಹಾಗೂ ಕಡ್ಡಿ ಮೆಣಸಿನಕಾಯಿ 69,999 ರೂ. ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ರೋಣ ತಾಲೂಕಿನ ಸವಡಿ ಗ್ರಾಮದ ರೈತ ವಿಜಯಕುಮಾರ ಪ್ರಕಾಶ ಸಜ್ಜನರ ಬೆಳೆದ ಡಬ್ಬಿ ಹಾಗೂ ಕಡ್ಡಿ ಮೆಣಸಿನಕಾಯಿಗೆ ಈ ದರ ದೊರೆತಿದೆ. 23 ವರ್ಷದ ಪದವೀಧರ ಯುವ ರೈತ ಸಜ್ಜನರ ಮೊದಲ ಪ್ರಯತ್ನದಲ್ಲೇ ಭರ್ಜರಿ ಇಳುವರಿ ತೆಗೆದು ಸೈ ಎನಿಸಿಕೊಂಡಿದ್ದಾರೆ. ಮಾರುಕಟ್ಟೆ ಆರಂಭವಾದ ನಂತರ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಯಾವುದೇ ತಳಿಯ ಮೆಣಸಿನಕಾಯಿ ಮಾರಾಟವಾಗಿರಲಿಲ್ಲ. ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಡಬ್ಬಿ ತಳಿ ಬೆಲೆ 50ರಿಂದ 60 ಸಾವಿರ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿತ್ತು. ಈ ವರ್ಷ ಆವಕದ ಕೊರತೆ ಹಾಗೂ ರೈತ ವಿಜಯಕುಮಾರ ಬೆಳೆದ ಮೆಣಸಿನಕಾಯಿ ಗುಣಮಟ್ಟದಿಂದಾಗಿ ಬಂಗಾರದ ಬೆಲೆ ದೊರೆತಿದೆ ಎಂದು ವರದಿಯಾಗಿದೆ.

ಕೇವಲ ಡಬ್ಬಿ ಮಾತ್ರವಲ್ಲದೆ, ತನ್ನ ಹೊಲದಲ್ಲಿ ಕಡ್ಡಿ ಮೆಣಸನ್ನು ಸಹ ಬೆಳೆದಿರುವ ರೈತ ವಿಜಯಕುಮಾರನಿಗೆ ಅದರಲ್ಲೂ ಬಂಪರ್ ದರ ದೊರೆತಿರುವುದು ಡಬಲ್ ಖುಷಿ ನೀಡಿದೆ. ಅವರು ಬೆಳೆದ ಕಡ್ಡಿ ಮೆಣಸಿನಕಾಯಿಗೆ 69,999 ರೂ. ಪ್ರತಿ ಕ್ವಿಂಟಲ್‌ಗೆ ಮಾರಾಟವಾಗಿದ್ದು ಸಹ ಮಾರುಕಟ್ಟೆಯಲ್ಲಿ ದಾಖಲೆ ಎನಿಸಿದೆ. ಡಬ್ಬಿ ಹಾಗೂ ಕಡ್ಡಿ ಎರಡೂ ತಳಿಯ ಮೆಣಸಿನಕಾಯಿಯನ್ನು ಸಜ್ಜನರ ಅವರು ಮಾರುಕಟ್ಟೆಯ ಹಾಲ ಸಿದ್ಧಲಿಂಗೇಶ್ವರ ಟ್ರೇಡಿಂಗ್ ಕಂಪನಿಯಲ್ಲಿ ಟೆಂಡರ್‌ಗೆ ಇಟ್ಟಿದ್ದರು. ಹೊನ್ನಮ್ಮದೇವಿ ಟ್ರೇಡರ್ಸ್ ಖರೀದಿದಾರರಿಂದ ಬಂಪರ್ ಬೆಲೆ ದೊರೆತ ಹಿನ್ನೆಲೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ನಮ್ಮಲ್ಲಿ ಒಣ ಬೇಸಾಯವೇ ಪ್ರಮುಖ ಕೃಷಿ, ಯಾವುದೇ ರಾಸಾಯನಿಕ ಬಳಸದೇ ಕೃಷಿ ಮಾಡಲು ನಿರ್ಧರಿಸಿ ಮೆಣಸಿನಕಾಯಿ ಬೆಳೆದಿದ್ದೆ. ಮಳೆ ಕೊರತೆಯಿಂದ ಅಂದುಕೊಂಡಂತೆ ಇಳುವರಿ ಬರದಿದ್ದರೂ ದಾಖಲೆ ದರ ದೊರೆತಿರುವುದು ಅತ್ಯಂತ ಖುಷಿ ನೀಡಿದೆ.

Category
ಕರಾವಳಿ ತರಂಗಿಣಿ