ಚಿತ್ರದುರ್ಗ: ಜಿಲ್ಲೆಯಲ್ಲಿಈ ಬಾರಿ ಪ್ರತಿಕೂಲ ಮುಂಗಾರಿನಿಂದಾಗಿ ಶೇಂಗಾ ಇಳುವರಿ ಕುಂಠಿತವಾಗಿದ್ದು, ಎಪಿಎಂಸಿಗೆ ಬರುವ ಆವಕದಲ್ಲಿಗಣನೀಯ ಪ್ರಮಾಣದ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಆವಕ ಕಡಿಮೆಯಾಗಿದೆ. ಆವಕ ಕಡಿಮೆ ಇರುವುದರಿಂದ ಶೇಂಗಾಕ್ಕೆ ಬಂಪರ್ ಬೆಲೆಯೂ ಇದೆ. ರಾಜ್ಯದ ಶೇಂಗಾ ಬೆಳೆಯುವ ತುಮಕೂರು, ಹಾವೇರಿ, ವಿಜಯಪುರ ಮತ್ತಿತರೆ ಕಡೆ ಕೂಡಾ ಎಪಿಎಂಸಿಗಳಿಗೆ ಶೇಂಗಾ ಆವಕದಲ್ಲಿ ಇಳಿಕೆಯಾಗಿದೆ. ಇದರ ಪರಿಣಾಮ ಶೇಂಗಾ ಎಣ್ಣೆ, ಶೇಂಗಾ ಬೀಜದ ದರದಲ್ಲಿತೀವ್ರ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂಗಾಣದ ಶೇಂಗಾ ಎಣ್ಣೆಯ ಬೆಳೆ ಕಳೆದೊಂದು ತಿಂಗಳಿನಿಂದಲೇ ಹೆಚ್ಚಳವಾಗುತ್ತಾ ಬಂದಿದೆ. ಶೇಂಗಾ ಆವಕ ಇಳಿಕೆಯ ಬೆನ್ನಲ್ಲೇ ಬೆಲೆಗಳಲ್ಲಿಏರಿಕೆ ಕಂಡುಬರುತ್ತಿದೆ. ರಾಜ್ಯದ ಹಲವು ಎಪಿಎಂಸಿಗಳಲ್ಲಿ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ ಸರಾಸರಿ 6,262 ರೂ.ಗಳಿಂದ 8,669 ರೂ.ಗಳವರೆಗೆ ಸಿಗುತ್ತಿದೆ.
ಒಳ್ಳೆಯ ದರ ಇರುವಾಗಲೇ ಬೆಳೆ ಇಲ್ಲ ಎಂದು ಕೊರಗುವಂತಾಗಿದೆ. ಶೇಂಗಾ ನಂಬಿದ್ದ ರೈತರು ಈ ಬಾರಿಯೂ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಪ್ರಮಾಣದಲ್ಲಿಕುಸಿತ ಆಗಿದ್ದರೂ, ಈಗಲೂ ಮಳೆಯಾಶ್ರಿತ ಪ್ರದೇಶದಲ್ಲಿಅತಿ ಹೆಚ್ಚು ಪ್ರಮಾಣದಲ್ಲಿಶೇಂಗಾ ಬೆಳೆಯುತ್ತಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲೂಕುಗಳಲ್ಲಿ ವ್ಯಾಪಕವಾಗಿ ಶೇಂಗಾ ಬೆಳೆಯುತ್ತಿದ್ದು, ಲಾಭವೋ ನಷ್ಟವೋ ಶೇಂಗಾ ಒಂದೇ ಆಯ್ಕೆ ಎನ್ನುವಂತಾಗಿದೆ.