image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಪ್ರಧಾನ ಮಂತ್ರಿ ಧನ್​ ಧಾನ್ಯ ಕೃಷಿ ಯೋಜನೆಗೆ ವಾರ್ಷಿಕ 24000 ಕೋಟಿ ಮೀಸಲು

ಪ್ರಧಾನ ಮಂತ್ರಿ ಧನ್​ ಧಾನ್ಯ ಕೃಷಿ ಯೋಜನೆಗೆ ವಾರ್ಷಿಕ 24000 ಕೋಟಿ ಮೀಸಲು

ನವದೆಹಲಿ: 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಧನ್ - ಧಾನ್ಯ ಕೃಷಿ ಯೋಜನೆಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಕೃಷಿ ಉತ್ಪಾದಕತೆ ಹೆಚ್ಚಳ, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗೆ ಉತ್ತೇಜನ, ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಳ, ನೀರಾವರಿ ಸೌಲಭ್ಯಗಳ ಸುಧಾರಣೆಗೆ ಸಾಲ ಲಭ್ಯತೆ ಸುಗಮಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಈ ಯೋಜನೆಯು 1.7 ಕೋಟಿ ಕೃಷಿಗರಿಗೆ ಸಹಾಯ ಮಾಡಲಿದ್ದು, 100 ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಗಾಗಿ ಕನಿಷ್ಠ 6 ವರ್ಷ ವಾರ್ಷಿಕ 24,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿದರು. ಜಿಲ್ಲಾ ಕಾರ್ಯಕ್ರಮಗಳ ಆಕಾಂಕ್ಷಿಗಳ ಯಶಸ್ಸಿನಿಂದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಫೆ 1ರಂದು ಮಂಡಿಸಿದ್ದ ಬಜೆಟ್​ನಲ್ಲಿ ರಾಜ್ಯಗಳ ಸಹಭಾಗಿತ್ವದೊಂದಿಗೆ ಪ್ರಧಾನಮಂತ್ರಿ ಧನ್​- ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಿದ್ದರು.

2025-26 ಬಜೆಟ್​ನಲ್ಲಿ ಈ ಯೋಜನೆ ಅಡಿ 100 ಜಿಲ್ಲೆಗಳ ಅಭಿವೃದ್ಧಿ ಮಾಡುವ ಕುರಿತು ಘೋಷಿಸಲಾಗಿತ್ತು. ಈ ಯೋಜನೆಯು ಸದ್ಯ ಚಾಲ್ತಿಯಲ್ಲಿರುವ 36 ಯೋಜನೆಗಳು, ರಾಜ್ಯದ ಇತರ ಯೋಜನೆಗಳು ಮತ್ತು ಖಾಸಗಿ ವಲಯದೊಂದಿಗೆ ಸ್ಥಳೀಯ ಪಾಲುದಾರಿಕೆಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಕಡಿಮೆ ಉತ್ಪಾದನೆ, ಕಡಿಮೆ ಇಳುವರಿ ಮತ್ತು ಕಡಿಮೆ ಹಣದ ವಿತರಣೆ ಹೀಗೆ ಮೂರು ಪ್ರಮುಖ ಅಂಶಗಳ ಮೇಲೆ 100 ಜಿಲ್ಲೆಗಳನ್ನು ಗುರುತಿಸಲಾಗುವುದು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತದ ಜಿಲ್ಲೆಗಳ ನಿವ್ವಳ ಬೆಳೆ ಪ್ರದೇಶದ ಪಾಲು ಮತ್ತು ಕಾರ್ಯಾಚರಣೆ ಆಧಾರಿತವಾಗಿದ್ದು, ಪ್ರತಿ ರಾಜ್ಯದಲ್ಲಿ ಕನಿಷ್ಠ 1 ಜಿಲ್ಲೆಯನ್ನು ಆಯ್ಕೆ ಮಾಡಲಾಗುವುದು.

ಪ್ರಧಾನ ಮಂತ್ರಿ ಧನ್​ ಧಾನ್ಯ ಕೃಷಿ ಯೋಜನೆಯು ಸುಗ್ಗಿಯ ನಂತರದ ಸಂಗ್ರಹಣೆಯಲ್ಲಿ ಹೆಚ್ಚಳ, ನೀರಾವರಿ ಸೌಲಭ್ಯ ಸುಧಾರಣೆ ಕೃಷಿ ಉತ್ಪಾದಕತೆ ಹೆಚ್ಚಿಸುತ್ತದೆ. ಪರಿಣಾಮಕಾರಿ ಯೋಜನೆ, ಅಳವಡಿಕೆ ಮತ್ತು ಯೋಜನೆ ನಿರ್ವಹಣೆಗೆ ಪ್ರತಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಜಿಲ್ಲಾ ಧನ ಧಾನ್ಯ ಸಮಿತಿಯು ಜಿಲ್ಲಾ ಕೃಷಿ ಮತ್ತು ಚಟುವಟಿಕೆ ಯೋಜನೆ ಅಂತಿಮಗೊಳಿಸಲಿದ್ದು, ಈ ಸಮಿತಿಯಲ್ಲಿ ಪ್ರಗತಿಪರ ಕೃಷಿಕರು ಸದಸ್ಯರಾಗಿರಲಿದ್ದಾರೆ.

Category
ಕರಾವಳಿ ತರಂಗಿಣಿ