ಬೆಂಗಳೂರು: ರಾಜ್ಯದಲ್ಲಿ ಒಣಮೆಣಸಿನಕಾಯಿಗೆ ಬೆಲೆ ಕೊರತೆ ಪಾವತಿ ಯೋಜನೆ ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಕೃಷಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ರಾಜ್ಯದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಬೆಲೆ ತೀವ್ರ ಕುಸಿತ ಕಂಡಿದ್ದು, ಲಕ್ಷಾಂತರ ಒಣಮೆಣಸು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಬೆಳೆಯುವ ಒಣಮೆಣಸಿನಕಾಯಿಗೆ ಬೆಲೆ ಕೊರತೆ ಪಾವತಿ ಯೋಜನೆಯನ್ನು ಮಂಜೂರು ಮಾಡಿದೆ. ಅಲ್ಲಿ ಪ್ರತಿ ಕ್ವಿಂಟಾಲ್ ಒಣಮೆಣಸಿನಕಾಯಿಗೆ 11,781 ರೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಇದು ಸ್ವಾಗತಾರ್ಹ ನಡೆಯಾಗಿದ್ದು, ರಾಜ್ಯದ ಒಣಮೆಣಸಿನಕಾಯಿ ರೈತರ ಸಂಕಷ್ಟಕ್ಕೂ ಕೇಂದ್ರ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಒಣಮೆಣಸಿನಕಾಯಿ ಉತ್ಪಾದನೆ ವೆಚ್ಚ ಪ್ರತಿ ಕ್ವಿಂಟಾಲ್ಗೆ 12,675 ರೂ. ಇರುವುದಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ನಿಗದಿಪಡಿಸಿದೆ. ಆದರೆ ರೈತರು ಪ್ರತಿ ಕ್ವಿಂಟಾಲ್ಗೆ 8,300 ರೂ.ಗೆ ಒಣಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಬರಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚು ಒಣಮೆಣಸಿನಕಾಯಿ ಬೆಳೆಯಲಾಗುತ್ತದೆ. ಬೆಲೆ ಕುಸಿತದಿಂದ ಅವರು ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಿಸಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಹೀಗಾಗಿ ರಾಜ್ಯದ ಒಣಮೆಣಸಿನಕಾಯಿಗೆ ಪ್ರತಿ ಕ್ವಿಂಟಾಲ್ಗೆ 13,500 ರೂ. ಎಂಐಪಿ ನಿಗದಿ ಮಾಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ಕನಿಷ್ಠ 75ಶೇ. ಒಣಮೆಣಸಿನಕಾಯಿ ಉತ್ಪಾದನೆಯನ್ನು ಎಂಐಪಿ ಯೋಜನೆಯ ವ್ಯಾಪ್ತಿಗೊಳಪಡಿಸುವಂತೆ ಕೋರಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಕೊರತೆ ಪಾವತಿ ಯೋಜನೆಯ ಪೂರ್ಣ ಹೊರೆಯನ್ನು ಹೊರುವಂತೆಯೂ ಮನವಿ ಮಾಡಿದ್ದಾರೆ. ರಾಜ್ಯದ ರೈತರನ್ನು ಸಂಕಷ್ಟದಿಂದ ಮೇಲೆತ್ತಲು ಕೂಡಲೇ ಈ ಸಂಬಂಧ ಕೇಂದ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.