image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ಕೃಷಿ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ವಿಧೇಯಕ ಅಂಗೀಕಾರ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು: ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಪ್ಲಾಟ್​ಫಾರ್ಮ್ ವೇದಿಕೆಗಳು ಇನ್ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ವಂಚನೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ.ಇ–ಪ್ಲಾಟ್​ಫಾರ್ಮ್​ಗಳು ಇನ್ಮುಂದೆ ಎಪಿಎಂಸಿಗಳಿಗೆ ಸೆಸ್ ಸಂದಾಯ ಮಾಡುವುದು ಕಡ್ಡಾಯ. ಸೆಸ್ ವಂಚನೆ ಮಾಡಿದರೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ನೀಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದ್ದಾರೆ.

ಕೃಷಿ ಮಾರುಕಟ್ಟೆ ನಿರ್ದೇಶಕರು ನೀಡುವ ಯಾವುದೇ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ನಿರ್ದೇಶಕರ ಆದೇಶ ಸ್ವೀಕರಿಸಿದ 30 ದಿನಗಳೊಳಗೆ ಕರ್ನಾಟಕ ಅಪೀಲು ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ತಿದ್ದುಪಡಿಯಿಂದ ಎಪಿಎಂಸಿ ಅಥವಾ ರೈತರನ್ನು ವಂಚನೆ ಮಾಡಲು ಸಾಧ್ಯವಿಲ್ಲ. ಕಂಪನಿಯೊಂದು ಸೆಸ್ ವಂಚನೆ ಮಾಡಿದ್ದರಿಂದ ದೊಡ್ಡ ಮೊತ್ತದ ದಂಡ ವಸೂಲು ಮಾಡಲಾಗಿದೆ. ಯಾವುದೇ ವ್ಯಕ್ತಿ ಲೈಸೆನ್ಸ್ ಪಡೆಯದ ಹೊರತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರಕ್ಕಾಗಿ ಇ–ವಾಣಿಜ್ಯ ವೇದಿಕೆ ಸ್ಥಾಪನೆ ಮಾಡುವಂತಿಲ್ಲ. ಉದ್ದೇಶಪೂರ್ವಕ ತಪ್ಪು ಮಾಹಿತಿ ಅಥವಾ ವಂಚನೆ ಮೂಲಕ ಲೈಸೆನ್ಸ್ ಪಡೆದಿದ್ದರೆ, ಲೈಸೆನ್ಸ್​​ದಾರರು ಯಾವುದೇ ನಿಬಂಧನೆ ಅಥವಾ ಷರತ್ತು ಉಲ್ಲಂಘನೆ ಮಾಡಿದರೆ ಮಾರುಕಟ್ಟೆ ನಿರ್ದೇಶಕರು ಲೈಸೆನ್ಸ್ ಅಮಾನತುಪಡಿಸುವ ಅಧಿಕಾರ ಹೊಂದಿರುತ್ತಾರೆ.ಇ-ವಾಣಿಜ್ಯ ವೇದಿಕೆ ಸ್ಥಾಪಿಸಲು ಮತ್ತು ನಡೆಸಲು ಬಯಸುವ ಯಾವುದೇ ವ್ಯಕ್ತಿ ಕೃಷಿ ಮಾರುಕಟ್ಟೆ ನಿರ್ದೇಶಕರು ಸೂಚಿಸಿದ ವಿಧಾನದಲ್ಲಿ ಶುಲ್ಕ ಮತ್ತು ಠೇವಣಿ ಇಟ್ಟು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದರು.

ಇ–ಪ್ಲಾಟ್​ಫಾರ್ಮ್​ನಲ್ಲಿ ನೋಂದಾಯಿಸಲು ಈ ಅಧಿನಿಯಮದಡಿ ಯುಕ್ತ ಪ್ರಾಧಿಕಾರವು ಲೈಸೆನ್ಸ್ ನೀಡಿದ ಲೈಸೆನ್ಸ್ ಯುಕ್ತ ವ್ಯಾಪಾರಿಗಳನ್ನು ಮಾತ್ರ ಅನುಮತಿಸತಕ್ಕದ್ದು. ವೇದಿಕೆಯಲ್ಲಿ ನಡೆಯುವ ಸಂಪೂರ್ಣ ವ್ಯಾಪಾರ ಕಾರ್ಯಾಚರಣೆ, ಸಂಬಂಧಿಸಿದ ಕಾರ್ಯಚಟುವಟಿಕೆ, ತೀರ್ಮಾನಗಳಲ್ಲಿ ಪಾರದರ್ಶಕ ಕಡ್ಡಾಯಗೊಳಿಸಲಾಗಿದೆ. ಎಲ್ಲ ವಹಿವಾಟು ದಾಖಲೆಗಳನ್ನು ವಿದ್ಯುನ್ಮಾನ ನಮೂನೆಯಲ್ಲಿ ನಿರ್ವಹಿಸಬೇಕು.ಲೈಸೆನ್ಸ್​ದಾರರು ಯಾವುದೇ ವಿವಾದ ಇತ್ಯರ್ಥಕ್ಕೆ ಇ–ವಾಣಿಜ್ಯ ವೇದಿಕೆಯಲ್ಲಿ ಮೂವತ್ತು ದಿನಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಸಲ್ಲಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರು ದೂರು ಸ್ವೀಕರಿಸಿದ ಮೇಲೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿದ ನಂತರ 60 ದಿನಗಳೊಳಗೆ ವಿವಾದ ಇತ್ಯರ್ಥಪಡಿಸಬೇಕಾಗುತ್ತದೆ ಎಂದರು.

ಹಣ್ಣು, ತರಕಾರಿ, ಹೂವುಗಳ ವಿಚಾರದಲ್ಲಿ ಮಾರಾಟವಾದ ಅಧಿಸೂಚಿತ ಕೃಷಿ ಉತ್ಪನ್ನಗಳಿಗಾಗಿ ಬೆಲೆಯ ಶೇಕಡಾ ಐದಕ್ಕೆ ಮೀರದಂತೆ ಮತ್ತು ಇತರ ಎಲ್ಲ ಅಧಿಸೂಚಿತ ಉತ್ಪನ್ನಕ್ಕೆ ಶೇಕಡಾ ಎರಡರಷ್ಟು ಮಾತ್ರ ಉಗ್ರಾಣಸೇವಾದಾತರು ಸೇವಾ ಶುಲ್ಕ ಪಡೆಯಬಹುದು. ಅಗ್ನಿ ದುರಂತ, ಕಳವು, ಮಳೆ ಅಥವಾ ಯಾವುದೇ ನೈಸರ್ಗಿಕ ವಿಪತ್ತುಗಳಿಗೆ ಉಗ್ರಾಣದ ಮಾಲೀಕರು ವಿಮೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.

Category
ಕರಾವಳಿ ತರಂಗಿಣಿ