ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇಂದು ಈರುಳ್ಳಿಗೆ ಬಂಪರ್ ಬೆಲೆ ಸಿಕ್ಕಿದೆ. ಈ ವರ್ಷದಲ್ಲೇ ಒಳ್ಳೆಯ ದರ ಸಿಕ್ಕಿದ್ದರಿಂದ ರೈತರು ಫುಲ್ ಖುಷ್ ಆಗಿದ್ದಾರೆ. ಕಷ್ಟ ಪಟ್ಟು ಬೆಳೆದಿದ್ದ ಈರುಳ್ಳಿ ಒಳ್ಳೆಯ ಲಾಭ ತಂದುಕೊಟ್ಟಿದ್ದರಿಂದ ಸಂತಸದಿಂದ ರೈತರು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ಬಾರಿ ಮಳೆ ಹೆಚ್ಚಾದ ಪರಿಣಾಮ ರೈತರಿಗೆ ನಿರೀಕ್ಷೆಗೆ ತಕ್ಕಷ್ಟು ಈರುಳ್ಳಿ ಇಳುವರಿ ಬಂದಿಲ್ಲ. ಆದರೆ ಹರಸಾಹಸ ಪಟ್ಟು ಉಳಿಸಿಕೊಂಡ ಈರುಳ್ಳಿಯನ್ನು ಬೆಳಗಾವಿ ಎಪಿಎಂಸಿಗೆ ಮಾರಾಟಕ್ಕೆ ತಂದಿದ್ಧ ರೈತರಿಗೆ ಜಾಕಪಾಟ್ ಹೊಡೆದಿದೆ. ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ 6,500 ರೂ.ವರೆಗೆ ಮಾರಾಟವಾಗಿದೆ. ಇದು ಈ ವರ್ಷಕ್ಕೆ ಹೋಲಿಸಿದರೆ ದಾಖಲೆ ಬೆಲೆ ಎನ್ನುತ್ತಾರೆ ವ್ಯಾಪಾರಿಗಳು ಮತ್ತು ರೈತರು.
ಮಹಾರಾಷ್ಟ್ರದ ಕೆಲ ರೈತರು ಕೂಡ ಇದೇ ಮಾರುಕಟ್ಟೆ ಅವಲಂಬಿಸಿದ್ದಾರೆ. ಇಲ್ಲಿಂದ ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಅಸ್ಸೋಂ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಮತ್ತಿತರ ಪ್ರದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ.
ಈ ಬಾರಿ ಮಳೆಯಿಂದಾಗಿ ಹಾನಿಯಾಗಿ ಆವಕ ಕಡಿಮೆ ಆಗಿದೆ. ಹಾಗಾಗಿ, ದರ ಹೆಚ್ಚಿದೆ. ನಿನ್ನೆ ಬುಧವಾರ 2,200-6,500ರೂ. ವರೆಗೆ ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿದೆ. ಹಾಗೇ 7,773 ಕ್ವಿಂಟಾಲ್ ಈರುಳ್ಳಿ ಮಾತ್ರ ಆವಕವಾಗಿದೆ.