ಬೆಂಗಳೂರು: ಸರ್ಕಾರಿ ಸಂಸ್ಥೆಗಳಿಂದ ಮಾತ್ರ ಪ್ರಮಾಣೀಕೃತ ಹಾಗೂ ನ್ಯಾಯಯುತ ಗುರುತು (ಲೇಬಲ್) ಇರುವ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಮೆಸರ್ಸ್ ಕರ್ನಾಟಕ ರಾಜ್ಯ ಪ್ರಮಾಣೀಕೃತ ಬೀಜ ಉತ್ಪಾದಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದ್ದು, ಅರ್ಜಿ ವಜಾಗೊಳಿಸಿದೆ.
''ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ. ಹಾಗಾಗಿ, ಆ ಆದೇಶದಲ್ಲಿ ಯಾವುದೇ ದೋಷಗಳು ಕಂಡು ಬರುತ್ತಿಲ್ಲ. ಹೀಗಾಗಿ, ಸರ್ಕಾರದ ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ'' ಎಂದು ಪೀಠ ಹೇಳಿದೆ.
''ಸರ್ಕಾರ ತನ್ನ ಆದೇಶದ ಕುರಿತು ಉದ್ದೇಶ ಮತ್ತು ಕಾರಣ ನೀಡಿದ್ದು, ಅದರಲ್ಲಿ ಗುಣಾತ್ಮಕ ಮತ್ತು ಪ್ರಮಾಣೀಕೃತ ಬೀಜಗಳು ಸಕಾಲದಲ್ಲಿ ರೈತರಿಗೆ ಪೂರೈಕೆ ಆಗಬೇಕು ಎಂದು ವಿವರಿಸಲಾಗಿದೆ. ಹಾಗಾಗಿ, ಸರ್ಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗದು'' ಎಂದು ತಿಳಿಸಿದೆ.
''ಸಾರ್ವಜನಿಕ ಖರೀದಿಯಲ್ಲಿ ಕರ್ನಾಟಕ ಪಾರದರ್ಶಕ ಕಾಯಿದೆ 1999 ಸೆಕ್ಷನ್ 4 (ಜಿ) ಅಡಿ ಆದೇಶವನ್ನು ಹೊರಡಿಸಲಾಗಿದೆ, ಇದು ಏಕಪಕ್ಷೀಯವೆಂದು ಹೇಳಲಾಗದು. ಅರ್ಜಿದಾರರಿಗೆ ವ್ಯಾಪಾರ ಮಾಡಲು ಹಕ್ಕಿದೆ, ಅವರ ಹಕ್ಕಿಗೆ ಯಾವುದೇ ತೊಂದರೆ ಆಗಿಲ್ಲ. ರಾಜ್ಯದಲ್ಲಿ ಒಟ್ಟು 15.73 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಸರ್ಕಾರಿ ಸಂಸ್ಥೆಗಳು 6.93 ಲಕ್ಷ ಕ್ವಿಂಟಾಲ್ ಬೀಜವನ್ನು ಪೂರೈಸುತ್ತಿವೆ. ಉಳಿದ 8.08 ಲಕ್ಷ ಕ್ವಿಂಟಾಲ್ ಅನ್ನು ಖಾಸಗಿ ಸಂಸ್ಥೆಗಳು ಪೂರೈಸಲು ಮುಕ್ತ ಅವಕಾಶವಿದೆ. ಅವು ಅದಕ್ಕೆ ಸಂಬಂಧಿಸಿದ ಟೆಂಡರ್‌ನಲ್ಲಿ ಭಾಗವಹಿಸಬಹುದಾಗಿದೆ'' ಎಂದು ಆದೇಶಿಸಿದೆ.