image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಂಗಾ ಪಾನಂ ಗಂಗಾ ಸ್ನಾನಂ

ತುಂಗಾ ಪಾನಂ ಗಂಗಾ ಸ್ನಾನಂ

"ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಮಾತಿದೆ. ತುಂಗಾ ನದಿ ಸಿಹಿ ನೀರಿಗೆ ಪ್ರಸಿದ್ಧ. ತುಂಗೆಯು ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಭದ್ರೆ, ನೇತ್ರೆಯರ ಜೊತೆ ಹುಟ್ಟುತ್ತಾಳೆ. ಅಲ್ಲಿಂದ ಮುಂದೆ ಸಾಗಿ ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಸುಮಾರು 147 ಕಿ.ಮೀ. ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರೆಯ ಜೊತೆ ಸಂಗಮವಾಗುತ್ತಾಳೆ.

ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಹರಿದು ಆಂಧ್ರ ಪ್ರದೇಶದ ಕರ್ನೂಲ್ ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು. ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ ಹೊಸಪೇಟೆಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ ಶೃಂಗೇರಿ.

ತೀರ್ಥಹಳ್ಳಿ ಮತ್ತು ಶಿವಮೊಗ್ಗ ತುಂಗಾ ನದಿಯ ತಟದಲ್ಲಿರುವ ಇತರ ಪ್ರಮುಖ ಪಟ್ಟಣಗಳು. ಕಾಶಿಗಿಂತಲೂ ಗುಲಗಂಜಿಯಷ್ಟು ಪುಣ್ಯಪ್ರಾಪ್ತಿಯಾಗುವ ಕ್ಷೇತ್ರ ಕೂಡಲಿ. ಹೆಸರೇ ಸೂಚಿಸುವಂತೆ ತುಂಗ-ಭದ್ರಾ ನದಿಗಳು ಸಂಗಮವಾಗಿರುವ ಪವಿತ್ರ ಕ್ಷೇತ್ರ ಈ “ಕೂಡಲಿ” ಎಂಬ ಊರು. ನದಿಯ ಎರಡೂ ದಂಡೆಯ ಮೇಲೆ ಕಣ್ಣಾಡಿಸಿದರೆ ಹಸಿರ ಸಿರಿಯ, ಗಿರಿ ಪಂಕ್ತಿಗಳ ಸಾಲು ಸಾಲು. ನದಿಯ ಜುಳು ಜುಳು ಕಲರವ ಮನಸ್ಸಿಗೆ ಒಂದು ರೀತಿಯ ಆಹ್ಲಾದವನ್ನು ತರುತ್ತದೆ. ತುಂಗಾಭದ್ರಾ ನದಿ ತಟದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ. ಅದರಲ್ಲಿ ರಾಮೇಶ್ವರ ದೇವಾಲಯವೂ ಒಂದು. ಇದು ಹೊಯ್ಸಳ ಶೈಲಿಯ ದೇವಾಲಯವಾಗಿದ್ದು, ಇಲ್ಲಿರುವ ಲಿಂಗವನ್ನು ಶ್ರೀ ರಾಮನೇ ಬಂದು ಪ್ರತಿಷ್ಠೆ ಮಾಡಿದನೆಂಬ ಪ್ರತೀತಿ ಇದೆ.

ಶ್ರೀಚಿಂತಾಮಣಿ ನರಸಿಂಹ ದೇವಸ್ಥಾನವೂ ಕೂಡ ಪುರಾಣ ಕಾಲದಲ್ಲಿ ಪ್ರತಿಷ್ಟೆಯಾದ ದೇವಸ್ಥಾನ ಎನ್ನಲಾಗುತ್ತದೆ. ಕೂಡಲಿಯ ಮುಖ್ಯ ಪ್ರವೇಶದಲ್ಲಿ ಕಾಣುವ ಶ್ರೀ ಬ್ರಹ್ಮೇಶ್ವರ ದೇವಾಲಯವೂ ಪ್ರಸಿದ್ದ ದೇವಾಲಯವಾಗಿದೆ. ಶ್ರೀ ಶಂಕರಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಾರದಾ ದೇವಸ್ಥಾನ ಹಾಗೂ ಶಂಕರಮಠವೂ ಇಲ್ಲಿದೆ. ಇಲ್ಲಿ ಮುಖ್ಯವಾಗಿ ಮಕ್ಕಳಿಗೆ “ಅಕ್ಷರಾಭ್ಯಾಸ” ಮಾಡಲಾಗುತ್ತದೆ. ವಿಜಯನಗರ ಅರಸರ ಕಾಲದ ಐತಿಹಾಸಿಕ ಸ್ಥಳ. 1336ರಿಂದ 1565ರವರೆಗೆ  ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿದ್ದ ಹಂಪೆಯು ಇರುವುದು ತುಂಗಭದ್ರ ತಟದಲ್ಲಿ. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತ್ತು.

ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಜಯ ನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು.

ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಇಂದಿಗೂ ಹಂಪಿಯಲ್ಲಿ ನೋಡಬಹುದಾಗಿದೆ.

ಹೀಗೆ 380 ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿದು ಮುಂದೆ ತೆಲಂಗಾಣ ಪ್ರವೇಶಿಸಿ ಒಟ್ಟು ಸುಮಾರು 600 ಕಿ.ಮಿ.ಗಷ್ಟು ಸಾಗಿ ಕೃಷ್ಣೆಯೊಂದಿಗೆ ಬಂಗಾಳಕೊಲ್ಲಿ ಸೇರುತ್ತಾಳೆ ತುಂಗೆ.

✍ಲಲಿತಶ್ರೀ ಪ್ರೀತಂ ರೈ

 

Category
ಕರಾವಳಿ ತರಂಗಿಣಿ