ಹಿಮಾಲಯದ ಮಡಿಲಲ್ಲಿ, ಸಮುದ್ರ ಮಟ್ಟದಿಂದ ಸುಮಾರು 15,060 ಅಡಿ ಎತ್ತರದಲ್ಲಿರುವ ಪವಿತ್ರ ಮಾನಸ ಸರೋವರವು ಕೇವಲ ಒಂದು ಜಲರಾಶಿಯಾಗಿಲ್ಲ, ಬದಲಾಗಿ ಇದು ಕೋಟ್ಯಂತರ ಭಕ್ತರ ನಂಬಿಕೆ ಮತ್ತು ಭಕ್ಯಿಯ ಸಂಕೇತ. ಪುರಾಣಗಳ ಪ್ರಕಾರ, ಈ ಸರೋವರವು ಸೃಷ್ಟಿಕರ್ತ ಚತುರ್ಮುಖ ಬ್ರಹ್ಮನ 'ಮನಸ್ಸಿನ' ಸಂಕಲ್ಪದಿಂದ ಉದಿಸಲ್ಪಟ್ಟಿದ್ದರಿಂದ ಇದಕ್ಕೆ 'ಮಾನಸ ಸರೋವರ' ಎಂಬ ಹೆಸರು ಬಂದಿದೆ. ಪುರಾತನ ಕಾಲದಲ್ಲಿ ಋಷಿ-ಮುನಿಗಳು ಕೈಲಾಸ ಪರ್ವತದ ಸಮೀಪ ಕಠಿಣ ತಪಸ್ಸು ಮಾಡುತ್ತಿದ್ದಾಗ, ಅವರಿಗೆ ಸ್ನಾನ ಮತ್ತು ದೈನಂದಿನ ಧಾರ್ಮಿಕ ವಿಧಿಗಳನ್ನು ಪೂರೈಸಲು ಜಲಮೂಲದ ಕೊರತೆಯುಂಟಾಗುತ್ತದೆ. ಆಗ ಅವರು ಬ್ರಹ್ಮನ ಮೊರೆ ಹೋಗುತ್ತಾರೆ. ಅವರ ಭಕ್ತಿ ಮತ್ತು ಕೋರಿಕೆಗೆ ಮೆಚ್ಚಿದ ಬ್ರಹ್ಮದೇವನು ತನ್ನ ದಿವ್ಯ ಶಕ್ತಿಯಿಂದ ಈ ಅದ್ಭುತ ಸರೋವರವನ್ನು ಧರೆಗೆ ತಂದನೆಂಬ ಎಂಬ ಉಲ್ಲೇಖವಿದೆ.
ಹಿಂದೂ ಧರ್ಮದ ನಂಬಿಕೆಯಂತೆ, ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಆಕಾಶದಿಂದ ದಿವ್ಯ ರೂಪದಲ್ಲಿ ಇಳಿದು ಬಂದು ಈ ಸರೋವರದಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿಯೇ ಮಾನಸ ಸರೋವರದ ನೀರು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.
ಅಷ್ಟೇ ಅಲ್ಲದೆ ಕೈಲಾಸ ಪರ್ವತವು ಪರಶಿವನ ವಾಸಸ್ಥಾನವಾದರೆ, ಅದರ ತಪ್ಪಲಿನಲ್ಲಿರುವ ಮಾನಸ ಸರೋವರವು ಪಾರ್ವತಿ ದೇವಿಯು ಸ್ನಾನ ಮಾಡುವ ಮತ್ತು ವಿಹರಿಸುವ ಪವಿತ್ರ ತಾಣವಾಗಿದೆ. ಇಲ್ಲಿನ ತಿಳಿಯಾದ ನೀರು ಮನಸ್ಸಿನ ಕಲ್ಮಶಗಳನ್ನು ತೊಳೆದು ಹಾಕುತ್ತದೆ ಎಂಬುದು ಭಕ್ತರ ದೃಢ ವಿಶ್ವಾಸ. ಪ್ರತಿವರ್ಷ ಸಾವಿರಾರು ಭಕ್ತರು ಅತ್ಯಂತ ಕಠಿಣ ಹಾದಿಯನ್ನು ಸವೆಸಿ ಇಲ್ಲಿಗೆ ಬರುವುದು ಕೇವಲ ಪ್ರಕೃತಿ ಸೌಂದರ್ಯಕ್ಕಲ್ಲ, ಬದಲಿಗೆ ಆ ದೈವಿಕ ಅನುಭೂತಿಗಾಗಿ ಕೂಡ.
ಈ ಸರೋವರದ ನೀರನ್ನು ಸ್ಪರ್ಶಿಸುವುದರಿಂದ ಅಥವಾ ಇದರಲ್ಲಿ ಮೀಯುವುದರಿಂದ ನೂರು ಜನ್ಮಗಳ ಪಾಪಗಳು ತೊಳೆದು ಹೋಗಿ, ಮರಣಾನಂತರ ವ್ಯಕ್ತಿಯು ಶಿವನ ಸಾನ್ನಿಧ್ಯವನ್ನು ಸೇರುತ್ತಾನೆ ಎಂಬುದು ಭಕ್ತರ ಅಚಲ ವಿಶ್ವಾಸ. ಕೇವಲ ಹಿಂದೂಗಳಿಗಷ್ಟೇ ಅಲ್ಲದೆ, ಜೈನ, ಬೌದ್ಧ ಮತ್ತು ಬೋನ್ ಧರ್ಮದವರಿಗೂ ಈ ಕ್ಷೇತ್ರವು ಅತ್ಯಂತ ಪವಿತ್ರವಾಗಿದೆ. ಬೌದ್ಧ ಧರ್ಮದ ಪ್ರಕಾರ, ಬುದ್ಧನ ತಾಯಿ ಮಾಯಾದೇವಿಯು ಬುದ್ಧನನ್ನು ಗರ್ಭದಲ್ಲಿ ಧರಿಸುವ ಮುನ್ನ ದೇವತೆಗಳು ಆಕೆಯನ್ನು ಈ ಸರೋವರಕ್ಕೆ ಕರೆತಂದು ಪವಿತ್ರ ಸ್ನಾನ ಮಾಡಿಸಿದ್ದರು ಎನ್ನಲಾಗುತ್ತದೆ.
ಶುಭ್ರ ನೀಲಿ ಬಣ್ಣದ ನೀರು, ಸುತ್ತಲೂ ಬೆಳ್ಳಿಯಂತೆ ಹೊಳೆಯುವ ಹಿಮದ ಶಿಖರಗಳು ಮತ್ತು ಮೌನ ತುಂಬಿದ ವಾತಾವರಣ ಇಲ್ಲಿನ ದೈವಿಕತೆಯನ್ನು ಇಮ್ಮಡಿಗೊಳಿಸುತ್ತವೆ. ಇದರ ಪಕ್ಕದಲ್ಲೇ 'ರಾಕ್ಷಸತಾಲ್' ಎಂಬ ಸರೋವರವಿದ್ದರೂ, ಭಕ್ತರು ಪೂಜಿಸುವುದು ಮತ್ತು ಪವಿತ್ರವೆಂದು ಭಾವಿಸುವುದು ಬ್ರಹ್ಮನ ಸೃಷ್ಟಿಯಾದ ಈ ಶಾಂತ ಮಾನಸ ಸರೋವರವನ್ನೇ. ಶತಶತಮಾನಗಳಿಂದಲೂ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಜ್ಞಾನ ಹಾಗೂ ಶಾಂತಿಯ ಸಂಕೇತವಾಗಿ ವರ್ಣಿಸಲ್ಪಟ್ಟಿರುವ ಈ ಸರೋವರವು, ಇಂದಿಗೂ ಸಾವಿರಾರು ಕಿಲೋಮೀಟರ್ ಹಾದಿ ಸವೆಸಿ ಬರುವ ಯಾತ್ರಿಕರಿಗೆ ಕೇವಲ ದರ್ಶನ ಮಾತ್ರದಿಂದಲೇ ಪರಮ ಸುಖವನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು.
✍ ಲಲಿತಶ್ರೀ ಪ್ರೀತಂ ರೈ