ದಕ್ಷಿಣ ಕನ್ನಡದ ಜೀವನದಿ ಹಾಗೇ ಪುಣ್ಯನದಿ ನೇತ್ರಾವತಿ. ಚಿಕ್ಕಮಂಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ, ಕಾರ್ಕಳದಿಂದ ೩೦ ಕಿ.ಮೀ ದೂರದಲ್ಲಿರುವ ಪ್ರಾಕೃತಿಕ ಸೊಬಗಿನ ಗಂಗಾ ಮೂ¯ದಲ್ಲಿ ತುಂಗಾ, ಭದ್ರ ಮತ್ತು ನೇತ್ರಾವತಿ ನದಿಗಳು ಹುಟ್ಟುತ್ತದೆ. ಪೌರಾಣಿಕ ಕಥೆಯ ಪ್ರಕಾರ ಹಿರಣ್ಯಾಕ್ಷನೆಂಬ ದಾನವನನ್ನು ವರಾಹ ಸ್ವಾಮಿ ಸಂಹರಿಸಿ ಭೂಮಿಯನುದ್ಧರಿಸಿದ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮಘಟ್ಟಗಳ ಒಂದು ಭಾಗವಾದ ಗಂಗಾಮೂಲ, ವರಾಹಪರ್ವತ ಎಂದು ಕರೆಯಲ್ಪಡುವ ವೇದಪಾದ ಪರ್ವತದಲ್ಲಿ ವಿಶ್ರಮಿಸಿದನಂತೆ. ಆಗ ಅ ಮೂರ್ತಿಯ ಎಡಕೋರೆಯಿಂದ ಇಳಿದ ಹನಿಗಳು ತುಂಗಾ ನದಿಯಾಗಿಯೂ, ಭೂಮಿಯನ್ನು ಭದ್ರವಾಗಿ ಹಿಡಿದುಕೊಂಡ ಬಲದಾಡೆಯ ಹನಿಗಳು ಭದ್ರಾ ನದಿಯಾಗಿಯೂ, ಕಣ್ಣಂಚಿನ ಹನಿಗಳು ನೇತ್ರಾವತಿಯಾಗಿಯೂ ಹರಿದುವೆಂಬುದು ಪುರಾಣ ಕಥೆ. ವರಾಹಪರ್ವತದ ಕಣ್ಣಿನಂತಿರುವ ಭಾಗದಿಂದ ಬರುವ ನೇತ್ರಾವತಿ ನದಿಯ ನೀರು ನೇತ್ರರೋಗ ಪರಿಹಾರಕವೆಂದು ನಂಬಿಕೆಯಿದೆ. ತುಂಗ ನದಿಯು ಉತ್ತರದಲ್ಲಿ ಶೃಂಗೇರಿ, ತೀರ್ಥಹಳ್ಳಿ ಮತ್ತು ಶಿವಮೊಗ್ಗವನ್ನು ಹಾದುಹೋಗುತ್ತದೆ. ಭದ್ರಾ ನದಿಯು ಪೂರ್ವಕ್ಕೆ ಹರಿದು ಭದ್ರಾವತಿ ಪಟ್ಟಣವನ್ನು ತಲುಪುತ್ತದೆ ಮುಂದೆ ಕೂಡ್ಲಿಯಲ್ಲಿ ತುಂಗವನ್ನು ಸೇರುತ್ತದೆ. ನೇತ್ರಾವತಿ ನದಿಯ ಪಶ್ಚಿಮಕ್ಕೆ ಹರಿದು, ಹಲವಾರು ಸಣ್ಣ ಸಣ್ಣ ಹೊಳೆಗಳೊಂದಿಗೆ ಪಶ್ಚಿಮಘಟ್ಟದ ಬಂಗಾಡಿ ಕಣಿವೆಯಲ್ಲಿಳಿದು ಧರ್ಮಸ್ಥಳ ಮಂಜುನಾಥನ ದಿವ್ಯನೆಲದಲ್ಲಿ ಭಕ್ತರ ಪಾಪವನ್ನು ತೊಳೆಯುತ್ತಾ ಮುಂದೆ ಸಾಗಿ ದಕ್ಷಿಣ ಕಾಶಿಯೆಂದು (ಮುಕ್ತಿ ಕ್ಷೇತ್ರ) ಖ್ಯಾತಿ ಪಡೆದಿರುವ ಉಪ್ಪಿನಂಗಡಿ ಸಹಸ್ರಲಿಂಗೇಶ್ವರನ ಸನ್ನಿದಿಯಲ್ಲಿ, ಕುಮಾರ ಪರ್ವತದಲ್ಲಿ ಹುಟ್ಟಿ ಸುಬ್ರಹ್ಮಣ್ಯನ ದಿವ್ಯ ಸಾನಿದ್ಯದಲ್ಲಿ ಭಕ್ತರನ್ನು ಪುಣೀತರನ್ನಾಗಿ ಮಾಡುತ್ತಾ ಮುಂದೆ ಹರಿದು ಬಂದ ಕುಮಾರದಾರನಲ್ಲಿ ಸಂಗಮವಾಗಿ ಉಪ್ಪಿನಂಗಡಿಯನ್ನು ಸಂಗಮ ಕ್ಷೇತ್ರವಾಗಿಸಿದವಳು. ಮಳೆಗಾಲದಲ್ಲಿ ಇಂದಿಗೂ ತುಳುವರು ಕೇಳುವ ಮಾಮೂಲು ಪ್ರಶ್ನೆ "ಉಬಾರ್ ಡ್ ಸಂಗಮ ಆಂಡ" ಅಂದರೆ ಉಪ್ಪಿನಂಗಡಿಯಲ್ಲಿ ಸಂಗಮ ಆಯ್ತಾ ಅಂತ. ಉಪ್ಪಿನಂಗಡಿಯಲ್ಲಿ ಸಂಗಮ ಆದರೆ ಮುಂದೆ ನೀರಿನ ತೊಂದರೆ ಇರುವುದಿಲ್ಲ ಎನ್ನುವ ಮಾತು ಕೂಡ ಇದೆ. ಸಂಗಮ ಆದರೆ ಉಪ್ಪಿನಂಗಡಿ ಪೇಟೆಗೆ ನೀರು ನುಗ್ಗುತ್ತದೆ. ಆಗ ನೆರೆಯ ಭಯ ಇರುತ್ತದೆ. ಆದರೂ ಈ ಸಂಗಮಕ್ಕಾಗಿ ಊರಿನ ಜನ ಕಾತರತೆಯಿಂದ ಕಾಯುತ್ತಾರೆ ಎನ್ನುವುದೆ ವಿಸ್ಮಯದ ವಿಷಯ. ಹಾಗೇ ಸಂಗಮ ಆದಾಗ ದೇವಸ್ಥಾನದ ಅರ್ಚಕರು ಬೆಳ್ಳಿತಟ್ಟೆಯಲ್ಲಿ ಹಾಲು ಸಮರ್ಪಿಸುತ್ತಾರೆ. ಹಾಗೆ ಇಲ್ಲಿಂದ ನೇತ್ರಾವತಿ ಕುಮಾರದಾರರು ಒಂದಾಗಿ ಸಹಸ್ರಲಿಂಗೇಶ್ವರನ ಪಾದ ತೊಳೆದು, ಅಲ್ಲಿ ನಡೆಯುವ ಆತ್ಮಗಳ ಸದ್ಗತಿಗೆ ತನ್ನ ಸಹಾಯ ಹಸ್ತವನ್ನು ತೋರಿ ಮುಂದೆ ಸಾಗುತ್ತಾ ಬಂಟ್ವಾಳ ಪೇಟೆಯನ್ನು ಮುಳುಗಿಸುವುದು ಕೂಡ ಸಾಮಾನ್ಯ. ಅಲ್ಲಿಂದ ಮುಂದೆ ಸಾಗಿದ ನೇತ್ರಾವತಿಗೆ ( ಕುಮಾರದಾರ ಜೊತೆಯಿದ್ದರೂ ಎಲ್ಲರೂ ಕರೆಯುವುದು ನೇತ್ರಾವತಿ ಎಂದೆ). ತುಂಬೆಯಲ್ಲಿ ಕಟ್ಟಿರುವ ಅಣೆಕಟ್ಟು ಮಂಗಳೂರು ನಗರಕ್ಕೆ ನೀರುಣಿಸಲು ಸಹಕಾರಿಯಾಗಿದೆ. ಉಳ್ಳಾಲ ಕೋಟೆ ಪುರದ ಅಳಿವೆ ಬಾಗಿಲಿನಲ್ಲಿ ಅರಬ್ಬೀ ಸಮುದ್ರವನ್ನು ಸೇರಿಕೊಳ್ಳುತ್ತಾಳೆ ನೇತ್ರಾವತಿ.