image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವರದಾ

ವರದಾ

ವರದಾ ನದಿಯು ಮಧ್ಯ ಕರ್ನಾಟಕದ ಒಂದು ನದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ ಉಗಮಿಸುವ ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ. ವರದಾ ನದಿಯ ಮೂಲವು ಸಾಗರ ನಗರದಿಂದ 6 ಕಿ.ಮೀ ದೂರ ಇದ್ದು ಮಲೆನಾಡಿನ ಒಂದು ಪ್ರಸಿದ್ದ ಪ್ರವಾಸಿ ಹಾಗೂ ತೀರ್ಥ ಕ್ಷೇತ್ರವಾಗಿದೆ.   ವರದಾ ನದಿಯ ಉಗಮ ಸ್ಥಳದಲ್ಲಿ ವರದಾಂಬಿಕಾ ದೇವಿಯ ದೇವಸ್ಥಾನವಿದ್ದು, ವರದಮೂಲವನ್ನು ತೀರ್ಥ ಗ್ರಾಮ ಎಂದೂ ಸಹ ಕರೆಯಲಾಗುತ್ತದೆ. ಇಲ್ಲಿ ವರದಾನದಿಯು ಲಕ್ಷ್ಮೀದೇವಿಯ ಪಾದದಡಿಯಿಂದ ಉದ್ಭವಿಸಿ ಲಕ್ಷ್ಮೀತೀರ್ಥವೆಂದು ಕರೆಯಲ್ಪಡುವ ಮೊದಲ ಕಲ್ಯಾಣಿಯನ್ನು ಸೇರುತ್ತಾಳೆಂಬ ಪ್ರತೀತಿಯಿದೆ. ವರ್ಷವಿಡೀ ತುಂಬಿರೋ ಈ ಕಲ್ಯಾಣಿಯಿಂದ ಸರ್ವತೀರ್ಥ ಎಂದು ಕರೆಯಲ್ಪಡುವ ಹೊರಗಿನ ದೊಡ್ಡ ಕಲ್ಯಾಣಿಗೆ ವರದೆ ಹರಿಯುತ್ತಾಳೆ.  ಹೊರಗಿನ ಕೊಳದಲ್ಲಿ ಪ್ರತೀ ಎರಡು ಮೂರು ಅಡಿಗಳಿಗೊಂದರಂತೆ ಒಟ್ಟು 24 ತೀರ್ಥಗಳು ಉಗಮಿಸುತ್ತವೆಂದೂ ಅದಕ್ಕೇ ಅದಕ್ಕೆ ಸರ್ವತೀರ್ಥವೆಂದು ಕರೆಯುತ್ತಾರೆಂಬ ಪ್ರತೀತಿ ಕೂಡ ಇದೆ. ಅದರ ಎದುರಿಗೆ ಸದಾಶಿವ ದೇಗುಲವಿದೆ. ಕೆಳದಿಯ ಅರಸ ಶಿವಪ್ಪನಾಯಕನ ಚಿಕ್ಕಪ್ಪ ಸದಾಶಿವನಾಯಕ ಈ ದೇಗುಲಕ್ಕೆ ಉಂಬುಳಿ ಕೊಟ್ಟಿದ್ದ ಕಾರಣ ಈ ದೇಗುಲಕ್ಕೆ ಸದಾಶಿವದೇಗುಲವೆಂದು ಹೆಸರಾಯಿತೆಂದು ಕೆಲವರ ಅಭಿಪ್ರಾಯ. ನದಿಯ ಬಗೆಗಿನ ಉಲ್ಲೇಖಗಳನ್ನು ನೋಡುವುದಾದರೆ ಮಹಾರಾಜ ಸಗರನು ನೀರಿಗಾಗಿ ಯಜ್ಞವೊಂದನ್ನು ಕೈಗೊಳ್ಳಲು ತಾಯಿ ವರದೆ ಪ್ರತ್ಯಕ್ಷಳಾಗಿ ನೀನು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬರುತ್ತೇನೆಂದೂ ಆದರೆ ಹಿಂದಿರುಗಿ ನೋಡಬೇಡವೆಂದೂ ಹೇಳುತ್ತಾಳಂತೆ. ಆತ ಸಾಗರವೆಂಬ ಪ್ರದೇಶದಲ್ಲಿ ಹಿಂತಿರುಗಿ ನೋಡುತ್ತಾನಂತೆ. ಅಲ್ಲಿಗೆ ನದಿಯ ಹರಿಯುವಿಕೆ ನಿಂತು ಆಕೆ ಬೃಹದಾಕಾರವಾಗಿ ಶೇಖರಗೊಳ್ಳುತ್ತಾಳಂತೆ. ಅದೇ ಈಗಿನ ಸಾಗರವೆಂಬ ಊರೆಂದು ಪ್ರತೀತಿ.   ವರದೆ ತನ್ನ ಹಾದಿಯ ಉದ್ದಕ್ಕೂ ಕನ್ನಡಿಗರ ಯೋಗಕ್ಷೇಮ ಕಾಪಾಡುತ್ತಿದ್ದಾಳೆ ಎನ್ನುವುದರಲ್ಲಿ ತಪ್ಪಿಲ್ಲ. ಬೇಸಿಗೆಯಲ್ಲಿ ನೀರಾವರಿ ಮತ್ತು ಗೃಹಬಳಕೆ ಉದ್ದೇಶಗಳಿಗೆ ನೀರು ಒದಗಿಸುವ ಸಲುವಾಗಿ ಈ ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ನದಿಯಿಂದ ಇಲ್ಲಿಯವರೆಗೆ ಯಾವುದೇ ಪ್ರಮುಖ ನೀರಾವರಿ ಯೋಜನೆಗಳು ಇಲ್ಲವಾದರೂ ಸರ್ಕಾರ ಪ್ರಾರಂಭಿಸಲು ಯೋಚಿಸುತ್ತಿದೆ. ಇಲ್ಲಿನ ಜನರಿಗೆ ಇದು ದೈವಿಕ ಅಂಶವುಳ್ಳ ನದಿಯಾಗಿದೆ. ಹೀಗೆ ವರೆದೆ ಸುಮಾರು 220 ಕಿ.ಮಿ ಹರಿದು ಹಾವೇರಿ ಜಿಲ್ಲೆಯ ಗಳಗನಾಥದಲ್ಲಿ ತುಂಗಾಭದ್ರೆಯರನ್ನು ಸೇರಿಕೊಂಡು ಸಂಗಮ ಕ್ಷೇತ್ರವನ್ನಾಗಿಸಿದ್ದಾಳೆ. ಇದೊಂದು ಹಾವೇರಿ ಜಿಲ್ಲೆಯಲ್ಲಿರುವ ಒಂದು ಪುಣ್ಯಕ್ಷೇತ್ರ. ಸುಂದರ ತಾಣವೂ ಹೌದು. ಇಲ್ಲಿರುವ ಗಳಗೇಶ್ವರ ದೇವಸ್ಥಾನದಿಂದ ಈ ಸ್ಥಳಕ್ಕೆ ಗಳಗನಾಥ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಗಳಗೇಶ್ವರ ಮುನಿ ಸ್ಥಾಪಿಸಿದರೆಂದು ಪ್ರತೀತಿ. ಈ ದೇವಾಲಯ 28ಮೀ. ಉದ್ದ 14ಮೀ ಅಗಲವಿದೆ. ಇದರ ಮೇಲ್ಚಾವಣಿಯನ್ನು ನಾಲ್ಕು ಸುಂದರವಾದ ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ದೇವಾಲಯದ ಸುತ್ತಲೂ ಗೋಡೆಯ ಮೇಲೆ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಕಟ್ಟಡದ ವೈಶಿಷ್ಟ್ಯವೆಂದರೆ ಇದರ ಅಡಿಪಾಯ. ಇದರ ಆಕಾರ ಪಿರಿಮಿಡ್‌ನಂತಿದೆ. ಇಲ್ಲಿ ಒಂದು ಹನುಮಂತದೇವರ ಗುಡಿಯೂ ಇದೆ. ಈ ಊರಲ್ಲಿ ಕಲ್ಯಾಣ ಚಾಳುಕ್ಯರ ಆರು ಶಾಸನಗಳು ದೊರೆತಿವೆ. ಹೊಯ್ಸಳ ವಿಷ್ಣುವರ್ಧನ ಇಲ್ಲಿಂದ ದಾನಮಾಡಿದ ಸಂಗತಿ ತಿಳಿದುಬರುತ್ತದೆ. ಈ ಗ್ರಾಮದ ಸಮೀಪದಲ್ಲಿ ಅನೇಕ ಬೃಹತ್ ಶಿಲಾ ಸಮಾಧಿಗಳು ಬೆಳಕಿಗೆ ಬಂದಿವೆ.  ದೇವಾಲಯವು ನದಿ ದಂಡೆಯ ಮೇಲಿರುವುದರಿಂದ ಹಾಗೂ ಗರ್ಭಗೃಹದ ಮೇಲಿನ ಗೋಪುರ ಬೃಹತ್ತಾದ್ದರಿಂದ ಅದರ ಸುರಕ್ಷತೆತೆಗಾಗಿ ಗೋಪುರದ ಸುತ್ತಲೂ ಬಲವಾದ ಗೋಡೆಯನ್ನು ಕಟ್ಟಲಾಗಿದೆ.

Category
ಕರಾವಳಿ ತರಂಗಿಣಿ