ಕಪಿಲಾ ನದಿಯು ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿದು ತಮಿಳುನಾಡಿನಲ್ಲಿ ಸಮುದ್ರವನ್ನು ಸೇರುತ್ತದೆ. ಇವಳು ಕೇರಳದ ವೈಯನಾಡಿನ ಪಶ್ಚಿಮ ಘಟ್ಟಗಳಲ್ಲಿ ಜನ್ಮತಾಳಿ ಕಾಕನಕೋಟೆಯ ನುಗು ನದಿಯ ಜೊತೆ ಗುಂಡ್ಲುಹೊಳೆಯನ್ನು ನಂಜನಗೂಡಿನ ಬಳಿ ಸೇರಿಕೊಳ್ಳುತ್ತದೆ. ಪುರಾಣ ಪ್ರಸಿದ್ಧವೂ, ಐತಿಹಾಸಿಕ ಹಿನ್ನೆಲೆಗಳಿಂದ ಕೂಡಿದ ನಂಜನಗೂಡಿನಲ್ಲಿ ನಂಜುಂಡೇಶ್ವರ ಸನಿಹದಲ್ಲಿರುವ ಪರಮ ಪಾವನವಾದ ಮಣಿಕರ್ಣಿಕಾ ಸರೋವರದಿಂದ ಕೂಡಿ, ಮುಂದೆ ತಿರುಮಕೂಡಲಿನಲ್ಲಿ ಕಾವೇರಿಯಲ್ಲಿ ಸಂಗಮವಾಗುತ್ತದೆ. ಸಂಗಮದ ಪೂರ್ವಕ್ಕೆ ಸುತ್ತೂರುವೆಂಬ ಸುಪ್ರಸಿದ್ಧ ಕ್ಷೇತ್ರವಿದೆ. ಇಲ್ಲಿ ರಾಜೇಂದ್ರ ಚೋಳರಿಂದ ಪ್ರತಿಷ್ಠಾಪಿಸಿಲ್ಪಟ್ಟ ಸೋಮೇಶ್ವರ ದೇವಾಲಯವಿದೆ. ಮಹಾಮಹಿಮರೂ, ಪರಂಜ್ಯೋತಿಸ್ವರೂಪರೂ ಆದ ಶಿವರಾತ್ರೀಶ್ವರರು ಕಪಿಲಾ ನದಿಯ ಮಧ್ಯಭಾಗದ ಬಂಡೆಯಲ್ಲಿ ಕುಳಿತು ತಪಗೈಯುತ್ತಿದ್ದ ಸಮಯದಲ್ಲಿ ಆಕಸ್ಮಿಕ ಪ್ರವಾಹ ಬಂದರೂ ಯತಿಗಳು ತಪೋಮಗ್ನರಾಗಿದ್ದರಂತೆ, ಇವರ ತಪಸ್ಸಿನ ಪ್ರಭಾವಕ್ಕೆ ಕಪಿಲೆಯೇ ದೂರ ಸರಿದು ತಪಸ್ಸಿಗೆ ಭಂಗ ಬರದಂತೆ ಮುಂದೆ ಸಾಗಿದಳಂತೆ, ಇವರು ತಪಸ್ಸು ಮಾಡುತ್ತಿದ್ದ ಬಂಡೆ ಇಂದಿಗೂ "ಶಿವರಾತ್ರೀಶ್ವರಬಂಡೆ" ಎಂದೇ ಪ್ರಸಿದ್ಧವಾಗಿದೆ. ಪುರಾಣ ಕಥೆಯ ಪ್ರಕಾರ ಲೋಕ ಪ್ರಸಿದ್ಧವಾದ ಸಗರ ಚಕ್ರವರ್ತಿಯು ಅಯೋಧ್ಯೆಯಲ್ಲಿ ವೈಭವಯುತವಾಗಿ ರಾಜ್ಯವಾಳುತ್ತಿದ್ದನು. ಭೃಗುಮುನಿಯ ಅನುಗ್ರಹದಿಂದ ಹಿರಿಯ ಮಡದಿ ದೇಶಳಿಗೆ ಅಸಮಂಜಸನೆಂಬ ಮಗನೂ, ಕಿರಿಯ ಹೆಂಡತಿಯಾದ ಸುಮತಿಗೆ ಅರವತ್ತು ಸಾವಿರ ಮಂದಿ ಮಕ್ಕಳು ಜನಿಸಿದರು. ಸಗರ ಚಕ್ರವರ್ತಿಯು ವಸಿಷ್ಠಾದಿ ಮಹಾಮುನಿಗಳನ್ನು ಮತ್ತು ಮಂತ್ರಿಗಳನ್ನು ಬರಮಾಡಿಕೊಂಡು ಅಶ್ವಮೇಧಯಾಗವನ್ನು ಮಾಡುವ ವಿಧಾನವನ್ನು ಕೇಳಲು, ಮಹಾಮುನಿ ವೃಂದವು ಅಶ್ವಮೇಧಯಾಗ ಮಾಡುವ ಕ್ರಮವನ್ನು ಚಕ್ರವರ್ತಿಗೆ ವಿವರಿಸಿದರು. ನಂತರ ಸಗರನು ಯಜ್ಞಾಶ್ವವನ್ನು ಭೂ ಪ್ರದಕ್ಷಿಣೆಗಾಗಿ ಬಿಟ್ಟು ಅದರ ರಕ್ಷಣೆಗಾಗಿ ತನ್ನ ಮಕ್ಕಳನ್ನು ಕಳುಹಿಸುತ್ತಾನೆ. ಈ ವಿಷಯ ತಿಳಿದ ಇಂದ್ರನು ಸಗರನೇನಾದರೂ ಶತಾಶ್ವಮೇಧಿಯಾದ ಪಕ್ಷದಲ್ಲಿ ತನ್ನ ಇಂದ್ರ ಪದವಿಗೆ ಹಾನಿಯಾಗುವುದೆಂದು ತಿಳಿದು ವಿಜಯಯಾತ್ರೆಗಾಗಿ ಬಿಟ್ಟಿದ್ದ ಯಜ್ಞಾಶ್ವವನ್ನು ಕದ್ದು ಪಾತಾಳದಲ್ಲಿ ತಪಗೈಯುತ್ತಿದ್ದ ಕಪಿಲ ಮುನಿಯ ಹಿಂದೆ ಕಟ್ಟುತ್ತಾನೆ.. ಅಶ್ವ ರಕ್ಷಣೆಗೆ ಹೊರಟಿದ್ದ ಸಗರನ ಮಕ್ಕಳು ಅಶ್ವವನ್ನು ಕಾಣದೆ ಪಾತಾಳಲೋಕಕ್ಕೆ ಅಸ್ತ್ರಗಳ ಸಹಾಯದಿಂದು ಹೋದಾಗ, ಅರಣ್ಯದಲ್ಲಿ ತಪಗೈಯುತ್ತಿದ್ದ ಕಪಿಲ ಮಹಾಮುನಿಯ ಹತ್ತಿರ ಯಜ್ಞಾಶ್ವವನ್ನು ಕಂಡು ಮುನಿಯನ್ನು ಥಳಿಸುತ್ತಾರೆ. ತಪೋಭಗ್ನರಾದ ಕಪಿಲ ಋಷಿಯು ಕೋಪವಿಷ್ಠರಾಗಿ ಸಗರ ಪುತ್ರರನ್ನು ನೋಡಲು, ಮುನಿಯ ನೇತ್ರಗಳಿಂದ ಹೊರಟ ಅಗ್ನಿಜ್ಞಾಲೆಯಿಂದ ಅವರೆಲ್ಲರೂ ಭಸ್ಮೀಭೂತರಾಗುತ್ತಾರೆ. ತಪಸ್ಸಿಗೆ ಭಂಗವಾಯಿತಲ್ಲ, ನನ್ನಿಂದ ಇವರೆಲ್ಲಾ ಹತರಾದರಲ್ಲಾ ಎಂದು ಚಿಂತಿಸುತ್ತಾ ಭೂಲೋಕಕ್ಕೆ ಬಂದು ನೀಲಾದ್ರಿ ಸಮೀಪ ತಪಗೈಯುತ್ತಾರೆ. ಇವರ ತಪಸ್ಸಿಗೆ ಮೆಚ್ಚಿದ ಪರಶಿವನು ತನ್ನ ಪರಿವಾರದೊಡನೆ ಬಂದು ಮುನಿಗೆ ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ ನಿನಗೆ ಬೇಕಾದ ವರ ಕೇಳು ಎನ್ನಲು ಮುನಿಯು ತನ್ನ ಪೂರ್ವ ವೃತ್ತಾಂತವನ್ನು ನಿವೇದಿಸುತ್ತಿರುವಾಗ ಶಿವನು ಮಧ್ಯ ಪ್ರವೇಶಿಸಿ ವಿಷ್ಣುವಾದ ನೀನು ಲೋಕಾನುಗ್ರಹಕ್ಕಾಗಿ ಈಗ ಕಪಿಲನಾಗಿರುವೆ. ನಿನ್ನ ವಿಷಯವನ್ನು ತಿಳಿಯದ ಸಗರ ಪುತ್ರರು ನಾಶಹೊಂದಿದರು. ನೀನು ಅಂತರ್ಮುಖಿಯಾಗಿ ನಿನ್ನ ಸ್ವರೂಪವನ್ನು ಅನುಸಂಧಾನ ಮಾಡುವುದಾದರೆ ನಿನ್ನ ಬ್ರಹ್ಮರಂಧ್ರದಲ್ಲಿರುವ ಅಮೃತವು ಹೊರಬರುವುದು ಆ ಅಮೃತ ಸೇಚನದಿಂದ 'ತುಲಸೀ' ನದಿಯು ಉದ್ಭವಿಸಿ 'ಕಪಿಲಾ' ಎಂಬ ನಿನ್ನ ನಾಮದಿಂದೇ ಪ್ರವಹಿಸುತ್ತಾ ಕಾವೇರಿ ನದಿಗೆ, ಬ್ರಹ್ಮ ನಿರ್ಮಿತ ಅಂತರ್ಗತವಾದ ಸ್ಫಟಿಕ ಸರೋವರದ ಸಮೀಪದಲ್ಲಿ ಸಂಗಮವಾಗುವೆ. ಅಲ್ಲಿಯೇ ನಾನು ವಾಸ ಮಾಡುವೆನೆಂದು ಹೇಳಿ ಮಾಯವಾದನು. ಶಿವನ ವಾಣಿಯಿಂದ ಸಂತೋಷಗೊಂಡ ಮುನಿಯು ಆತ್ಮಧ್ಯಾನ ನಿರತನಾದನು. ಆಗ ಅವನ ಬ್ರಹ್ಮರಂಧ್ರದಿಂದ ಅಮೃತವು ಉಕ್ಕಿ ಹರಿದು ತುಲಸೀ ಗಿಡವಾಗಿ ಪರಿಣಮಿಸಿತು. ಅದರ ಮೂಲದಲ್ಲಿ ಶಿವನ ಅಣತಿಯಂತೆ ಕಪಿಲಾ ನದಿಯು ಉತ್ಪತ್ತಿಯಾಗಿ ಹರಿಯತೊಡಗಿತು. ಸಕಲರ ಪಾಪಪರಿಹಾರಕವಾಗಿ ಕಾವೇರಿಯೊಡನೆ ಸಂಗಮವಾಗಲು ಆತುರಾತುರದಿಂದ ಹರಿಯತೊಡಗಿತು. ಈ ನದಿಯಲ್ಲಿ ಮಿಂದು ನಂಜುಂಡೇಶ್ವರನನ್ನು ಸಂದರ್ಶಿಸಿದವರಿಗೆ ಸಕಲ ಪಾಪಗಳು ಪರಿಹಾರವಾಗುವುವು. ಕಪಿಲಾ ಜಲಪಾನದಿಂದ ಅಂತರ್ಯದೋಷ ನಿವಾರಣೆ, ತರ್ಪಣಾದಿಗಳಿಂದ ಪಿತೃವರ್ಗವೂ ಸಂತೋಷ ಹೊಂದಿ ಉತ್ತಮ ಪದವಿ ಲಭ್ಯವಾಗುವುದೆನ್ನುವುದು ಭಕ್ತರ ನಂಬಿಕೆ.