image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶರಾವತಿ

ಶರಾವತಿ

ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿರುವ ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು.  ಶರಾವತಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುತ್ತದೆ. ಪ್ರಾಚೀನ ದಂತಕಥೆಯ ಪ್ರಕಾರ, ಸೀತಾ ದೇವಿಗೆ ಬಾಯಾರಿಕೆ ಆದಾಗ ಶ್ರೀರಾಮ ದೇವರು ತನ್ನ ಬಾಣವನ್ನು ನೆಲಕ್ಕೆ ಹಾರಿಸಿದ ಸಂದರ್ಭದಲ್ಲಿ ಬಾಣವು ಭೂಮಿಗೆ ಅಪ್ಪಳಿಸಿ ನೀರು ಚಿಮ್ಮಿತು. ಹಾಗೇ ಹುಟ್ಟಿದ ನದಿಯನ್ನು “ಶರಾವತಿ” ಎಂದು ಕರೆಯಲಾಗುತ್ತದೆ.  “ಶರಾ” ಎಂದರೆ ಬಾಣ ಎಂಬ ಅರ್ಥವನ್ನು ನೀಡುತ್ತದೆ. ಶರಾವತಿಗೆ ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಎಣ್ಣೆಹೊಳೆ, ಹರ್ಲಿಹೊಳೆ, ನಾಗೋಡಿಹೊಳೆ ಮುಂತಾದ ಉಪನದಿಗಳಿವೆ.

ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಜೋಗದಲ್ಲಿ ಶರಾವತಿಯು ಸುಮಾರು 830 ಅಡಿ ಧುಮುಕಿ ನಯನಮನೋಹರ  ಜೋಗ ಜಲಪಾತವನ್ನು ಸೃಷ್ಟಿಸಿದೆ. ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ.   ಜೋಗ ಅಥವಾ ಗೇರುಸೊಪ್ಪಿನ ಜಲಪಾತ ಸಿದ್ದಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದ್ದು, ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ.

ಆಣೆಕಟ್ಟೆಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು. ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅನೇಕ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ ಮತ್ತು ಅನೇಕ ರೀತಿಯ ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ನದಿಯ ಬಹುಪಾಲು ಪಶ್ಮಿಮ ಘಟ್ಟದಲ್ಲಿ ಇದ್ದು, ಶರಾವತಿ ನದಿಯ ಜಲಾನಯಾನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ.  ಹೊನ್ನೇಮರಡು ಲಿಂಗನಮಕ್ಕಿ ಅಣೆಕಟ್ಟಿನಿಂದ ರೂಪಿತಗೊಂಡ ಜಲಾಶಯದ ದ್ವೀಪವಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಈ ಸ್ಥಳವು ಜಲ ಕ್ರೀಡೆಗಳಿಗೆ ಉತ್ತಮವಾಗಿದೆ ಮತ್ತು ಇದೊಂದು ಆಕರ್ಷೀಣಿಯ ಸ್ಥಳವಾಗಿದೆ. ಕ್ಯಾನೋಯಿಂಗ್, ಕಯಾಕಿಂಗ್, ವಿಂಡ್ ಸರ್ಫಿಂಗ್ ಇಲ್ಲಿನ ಕೆಲವು ಜಲ ಕ್ರೀಡೆಗಳು. ಹೊನ್ನಾವರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯು ಹರಿಯುವ ಉದ್ದ ಸುಮಾರು ಸುಮಾರು 128 ಕಿ.ಮೀ.

Category
ಕರಾವಳಿ ತರಂಗಿಣಿ