image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಂದಿನಿ

ನಂದಿನಿ

ಪೃಕೃತಿ ನಮಗೆ ಒಂದಿಲ್ಲೊಂದು ಉಡುಗೊರೆ ಕೊಟ್ಟಿದೆ. ಅಂತಹ ಉಡುಗೊರೆಯಲ್ಲಿ ನದಿಗಳು ಕೂಡ ಒಂದು. ನದಿಗಳು ಜೀವನಾಡಿಗಳಾಗಿ ಜನಮಾನಸದಲ್ಲಿ ಉಳಿದಿದೆ. ಅಂತಹ ನದಿಗಳು ಪೌರಾಣಿಕ ಹಿನ್ನಲೆಯನ್ನು ಕೂಡ ಹೊಂದಿರುತ್ತದೆ.  ಅಂತಹ ನದಿಗಳಲ್ಲಿ “ನಂದಿನಿ”ಯೂ ಒಂದು. ಈ ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದು.   ಪೌರಣಿಕ ಕತೆಯ ಪ್ರಕಾರ ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಮಹಾಜ್ಙಾನಿಯಾದ ಜಾಬಾಲಿ ಮಹರ್ಷಿ ಜನರ ಕಷ್ಟಗಳನ್ನು ತನ್ನ ದಿವ್ಯ ದೃಷ್ಟಿಯಲ್ಲಿ ಕಂಡು, ಅವರ ಮೇಲಿನ ಕನಿಕರದಿಂದ ಅವರನ್ನು ನೋವುಗಳಿಂದ ಮುಕ್ತಗೊಳಿಸುವ ನಿರ್ಧಾರ  ಕೈಗೊಂಡು, ಆತನು ಒಂದು ಯಜ್ನವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸುತ್ತಾನೆ. ಕಾಮಧೇನುವನ್ನು ಕರೆತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಕಾಮಧೇನುವಿನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದೆಂದು ತಿಳಿಸುತ್ತಾನೆ.  ಆದರೆ ನಂದಿನಿಯೂ ಜಾಬಾಲಿಯ ಜೊತೆಗೆ ಭೂಲೋಕಕ್ಕೆ ಬರಲು ನಿಷ್ಟುರದಿಂದ ನಿರಾಕರಿಸಿ, ಭೂಲೋಕವು ಪಾಪಿಗಳ ಲೋಕ ಹಾಗಾಗಿ ನಾನೆಂದು ಅಲ್ಲಿಗೆ ಬರುವುದಿಲ್ಲವೆಂದು ಹೇಳುತ್ತಾಳೆ. ಜಾಬಾಲಿಯೂ ಪದೇ ಪದೇ ಮನವಿ ಮಾಡಿಕೊಂಡರೂ ನಂದಿನಿ ಹಠ ಹಿಡಿದು ಬರಲು ಒಪ್ಪುವುದಿಲ್ಲ. ಇದರಿಂದ ಕೋಪಗೊಂಡ ಜಾಬಾಲಿ ಮಹರ್ಷಿಯು  ಭೂಲೋಕಕ್ಕೆ ಬರಲೊಪ್ಪದ ನಂದಿನಿಯೂ ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪ ನೀಡುತ್ತಾನೆ. ಈ ಶಾಪದಿಂದ ಆತಂಕಕ್ಕೊಳಗಾದ  ನಂದಿನಿಯು ಜಾಬಾಲಿ ಮಹರ್ಷಿಗೆ ಕರುಣೆ ತೋರಿ ಶಾಪ ಹಿಂಪಡೆಯಬೇಕು ಎಂದಾಗ ಜಾಬಲಿ ಮಹರ್ಷಿಯು ಅದು ಸಾದ್ಯವಿಲ್ಲ ಎನ್ನುತ್ತಾರೆ. ಆಗ ನಂದಿನಿಯು ಅಂಗಲಾಚಿ ಶಾಪವಿಮೋಚನೆಗೆ ದಾರಿ ತಿಳಿಸಬೇಕೆಂದು ಬೇಡಿಕೊಂಡಳು. ಆಗ ಜಾಬಾಲಿ ಮಹರ್ಷಿಯು  ದುರ್ಗಾದೇವಿಯನ್ನ ಪ್ರಾರ್ಥಿಸಿದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ ಎಂದು ಹೇಳಲು ನಂದಿನಿ ದೇವಿಯನ್ನು ಕುರಿತು ತಪಸ್ಸನ್ನು ಆಚರಿಸುತ್ತಾಳೆ ಆಗ  ದುರ್ಗೆ ಪ್ರತ್ಯಕ್ಷಳಾಗಿ ವಿಷಯ ತಿಳಿಯಲು ನಂದಿನಿ ಜಾಬಲಿಯ ಶಾಪದ ಬಗ್ಗೆ ಹೇಳಿ ತನ್ನ ಶಾಪ ವಿಮೋಚನೆ ಮಾಡುವಂತೆ ಕೇಳುತ್ತಾಳೆ ಆಗ ದುರ್ಗೆಯು ಜಾಬಾಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯಲೇಬೇಕು. ನೀನು ನದಿಯಾಗಿ ಹರಿದ ನಂತರದಲ್ಲಿ ನಾನು ಮಗಳಾಗಿ ಹುಟ್ಟಿ ಶಾಪ ವಿಮೋಚನೆ ಮಾಡುವುದಾಗಿ ಹೇಳುತ್ತಾಳೆ. ಅದರಂತೆ ಕಟೀಲಿನ ಕುಂಜಾರುಗಿರಿಯಿಂದ ನಂದಿನಿ ನದಿಯ ರೂಪದಲ್ಲಿ ಹರಿಯುತ್ತಾಳೆ. ತನ್ನ ಮಾತಿನಂತೆ ನಂದಿನಿಯ ಕಟಿ ಭಾಗದಲ್ಲಿ ಉದ್ಭವಿಸಿ ನಂದಿನಿ ಶಾಪ ವಿಮೋಚನೆ ಗೊಳಿಸುತ್ತಾಳೆ. ಮಂದೆ ತಾಯಿ ಭ್ರಮರಾಂಬೆಯಾಗಿ ಕಟೀಲಿನಲ್ಲಿ ನೆಲೆ ನಿಂತು ಭಕ್ತರನ್ನು ಹರಸುತಿದ್ದಾಳೆ. ನಂದಿನಿ ನದಿಯು ಅತೀ ಚಿಕ್ಕ ನದಿ ಎನ್ನಬಹುದು. ಕುಂಜಾರು ಗಿರಿಯಲ್ಲಿ ಹುಟ್ಟಿದ ನಂದಿನಿ ಕಟೀಲಿಗೆ 16 ಕಿ.ಮಿ ಹರಿದು ಬಂದಿರುತ್ತಾಳೆ. ಇಲ್ಲಿಂದ ಮುಂದೆ ಸಮುದ್ರ ಸೇರಲು 16 ಕಿ.ಮಿ ಹರಿಯುತ್ತಾಳೆ. ಒಟ್ಟು ನದಿಯ ಉದ್ದ 32 ಕಿ.ಮಿ ಮಾತ್ರ.

Category
ಕರಾವಳಿ ತರಂಗಿಣಿ