ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ಪೃಕೃತಿಯಲ್ಲಿ ಹೆಣ್ಣನ್ನು ಕಂಡ ನಮ್ಮ ಹಿರಿಯರು ಭಾರತದಲ್ಲಿ ನದಿಗಳನ್ನು ಸ್ತ್ರೀ ಹೆಸರಿನಿಂದ ಕರೆದಿದ್ದಾರೆ. ಆದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. ಸಂಸ್ಕೃತ ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ. ಪೌರಾಣಿಕ ಹಿನ್ನಲೆಗಳ ಪ್ರಕಾರ ಕೈಲಾಸ, ಜರುಧಿ, ಸಂಬಾಕ ಪರ್ವತಗಳ ನಡುವಿನಲ್ಲಿ ವಾಸಿಸುತ್ತಿದ್ದ ಶಂತನು ಮತ್ತು ಅಮೋಘ ಎಂಬ ಋಷಿದಂಪತಿಗಳಿಗೆ ಬ್ರಹ್ಮನ ವರಪ್ರಸಾಧದಿಂದ ಹುಟ್ಟಿದ ಮಗನೇ ಬ್ರಹ್ಮಪುತ್ರ. ಮುಂದೆ ಬ್ರಹ್ಮನ ಇಚ್ಚೆಯಂತೆ ಬ್ರಹ್ಮಪುತ್ರ ಜಲರೂಪಧಾರಣೆ ಮಾಡುತ್ತಾನೆ. ನೈಋತ್ಯ ಟಿಬೆಟ್ ನ ಮಾನಸಸರೋವರದ "ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿದು, ಮುಂದೆ ಬಾಂಗ್ಲಾದೇಶವನ್ನು ಪ್ರವೇಶಿಸುವ ಈ ಅಲ್ಲಿ ಮಹಾನದಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯ ಭಾಗದಲ್ಲಿ ಈ ನದಿಯು ಗಂಗಾ ಜೊತೆ ಕೂಡಿಕೊಳ್ಳುವುದು.
ಭಾರತದಲ್ಲಿ ಬ್ರಹ್ಮಪುತ್ರ ಒಂದು ಪವಿತ್ರ ನದಿಯಾಗಿದ್ದು, ಹಿಮಾಲಯದಲ್ಲಿ ಹಿಮ ಕರಗುವ ಕಾಲದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಅಲ್ಲದೇ ಕೆಲವೊಮ್ಮೆ ಈ ನದಿಯಲ್ಲಿ ಪ್ರಳಯ ಸದೃಶ ಅಲೆಗಳು ಸಹ ಏಳುವುದುಂಟು. ವಿಶ್ವದ ಕೆಲವೇ ಮಹಾನದಿಗಳಲ್ಲಿ ಇಂತಹ ಅಲೆಗಳು ಏಳುತ್ತಿದೆಯಂತೆ. ಸುಮಾರು 1700 ಕಿ.ಮೀ. ವರೆಗೆ ಈ ನದಿಯು ಟಿಬೆಟ್‌ನಲ್ಲಿ ಪೂರ್ವಾಭಿಮುಖವಾಗಿ ಸಮುದ್ರಮಟ್ಟದಿಂದ ಸುಮಾರು 4000 ಮೀ. ಎತ್ತರದಲ್ಲಿ ಹರಿಯುತ್ತದೆ. ಬ್ರಹ್ಮಪುತ್ರ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಹರಿಯುವ ಮಹಾನದಿಯಾಗಿದೆ. ಪೂರ್ವದ ಅಂಚಿನಲ್ಲಿ ಈ ನದಿಯು ನಮ್ಚಾ ಬರ್ವಾ ಪರ್ವತವನ್ನು ಬಳಸಿ ಮುಂದೆ ಯಾರ್ಲುಂಗ್ ಟ್ಸಾಂಗ್ಪೋ ಕೊಳ್ಳವನ್ನು ಸೃಷ್ಟಿಸಿದೆ. ಈ ಕೊಳ್ಳವು ಜಗತ್ತಿನ ಅತಿ ಆಳದ ಕೊಳ್ಳವೆನ್ನಲಾಗುತ್ತದೆ. ಬ್ರಹ್ಮಪುತ್ರ ಭಾರತವನ್ನು ಅರುಣಾಚಲ ಪ್ರದೇಶದಲ್ಲಿ ಪ್ರವೇಶಿಸುತ್ತದೆ. ಅಲ್ಲಿ ಈ ನದಿಗೆ ಸಿಯಾಂಗ್ ಎಂಬ ಹೆಸರು. ಅಸ್ಸಾಮ್ ರಾಜ್ಯದುದ್ದಕ್ಕೂ ಹರಿಯುವ ಈ ಮಹಾನದಿಯು ಡಿಬ್ರೂಗಢದಿಂದ ಮುಂದಕ್ಕೆ ಎರಡು ಕವಲುಗಳಾಗಿ ಒಡೆಯುವುದು. ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. 100ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ದಕ್ಷಿಣಕ್ಕೆ ಹರಿದು ಮುಂದೆ ಗಂಗಾ ನದಿಯನ್ನು ಕೂಡಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.
✍ ಲಲಿತಶ್ರೀ ಪ್ರೀತಂ ರೈ