ಪ್ರಕೃತಿಯ ಸೊಬಗು ಈ ಭೂಮಿಗೆ ಮೆರಗು. ಈ ಪೃಕೃತಿಯಲ್ಲಿ ನದಿಗಳ ಪಾತ್ರ ಬಲುದೊಡ್ಡದು. ಭೂಮಿತಾಯಿಯು ಹಚ್ಚ ಹಸಿರಾಗಿ ನಲಿದಾಡಲು ಕಾರಣವೇ ಈ ನದಿಗಳು. ಅಂತಹ ಭಾರತದ ಪ್ರಮುಖ ನದಿಗಳಲ್ಲಿ ಕೃಷ್ಣೆಯೂ ಒಂದು. ಪುರಾಣಗಳಲ್ಲಿ ಕೃಷ್ಣವೇಣಿ ಎಂದು ಕರೆಯುವ ಈ ನದಿ ಮಹಾರಾಷ್ಟçದ ಮಹಾಬಲೇಶ್ವರ ಗಿರಿಯ ಪೂರ್ವದಲ್ಲಿ ಹುಟ್ಟುತ್ತದೆ. ಸಹ್ಯಾದ್ರಿ ತಪ್ಪಲಲ್ಲಿ ಕೃಷ್ಣಾ, ಕಾಕುದ್ಮತಿ, ಸಾವಿತ್ರಿ, ಗಾಯತ್ರಿ ಮತ್ತು ವೇಣಾ ಎಂಬ ಐದು ನದಿಗಳು ಉಗಮಗೊಳ್ಳುತ್ತದೆ. ಅದರಲ್ಲಿ ಸಾವಿತ್ರಿ ಮತ್ತು ಗಾಯತ್ರಿ ಮುಂದೆ ಒಂದಾಗಿ ಸೇರಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಭಾರತದ ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರದಿಂದ ಸುಮಾರು ೬೦ ಕಿ.ಮಿ ದೂರದಲ್ಲಿ ಜನಿಸಿ, ಪೂರ್ವಕ್ಕೆ ಹರಿಯುವಾಗ ಮುಂದೆ ಭೀಮಾ ಮತ್ತು ತುಂಭದ್ರೆಯರೂ ಕೃಷ್ಣೆಯ ಒಡಲನ್ನು ಸೇರಿಕೊಳ್ಳುತ್ತಾರೆ. ಹೀಗೆ ಹರಿಯುವ ಕೃಷ್ಣೆಯು ಸುಮಾರು 1250 ಕಿ.ಮಿ ದೂರ ಕ್ರಮಿಸಿ ಬಂಗಾಳಕೊಲ್ಲಿಯಲ್ಲಿ ವಿಲೀನಗೊಳ್ಳುತ್ತಾಳೆ.ಕೃಷ್ಣೆಯ ಉಗಮ ಸ್ಥಾನವು ಸಮುದ್ರಮಟ್ಟದಿಂದ ಸುಮಾರು 4500 ಅಡಿಗಳಷ್ಟು ಎತ್ತರದಲ್ಲಿದ್ದು ಅಲ್ಲಿ ಶಿವಮಂದಿರವಿದೆ. ಇದೊಂದು ಪ್ರಸಿದ್ದ ಯಾತ್ರಾಸ್ಥಳವಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದರ ಕಿ.ಮಿ. ಇದ್ದು, ಇದರಲ್ಲಿ ಮಹಾರಾಷ್ಟ್ರದಲ್ಲಿ 68,000 ಚ.ಕಿ.ಮಿ., ಕರ್ನಾಟಕದಲ್ಲಿ 1,12,600 ಚ.ಕಿ.ಮಿ. ಹಾಗೂ ಆಂಧ್ರ ಪ್ರದೇಶ ದಲ್ಲಿ 75,600 ಚ.ಕಿ.ಮಿ. ವ್ಯಾಪಿಸಿದೆ. ಮಹಾರಾಷ್ಟ್ರದಲ್ಲಿ ಕೊಯ್ನಾದ ಹತ್ತಿರ, ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಶ್ರೀಶೈಲಂ ಮತ್ತು ನಾಗಾರ್ಜುನಸಾಗರದಲ್ಲಿ ಕೃಷ್ಣಾ ನದಿಗೆ ಆಣೆಕಟ್ಟು ಗಳನ್ನು ಕಟ್ಟಲಾಗಿದೆ. 1962ರಲ್ಲಿ ಭಾರತದ ಪ್ರಧಾನ ಮಂತ್ರಿಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗೂ ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗೂ ಮಲಪ್ರಭಾಗಳ ಸಂಗಮದ ಕೆಳಭಾಗದಲ್ಲಿ ನಾರಾಯಣ ಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆ ಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. ಹಾಗೂ ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪೂರ್ಣ ಸಂಗ್ರಹವಾದಂತಾಗಿದೆ. ಆಲಮಟ್ಟಿಯಿಂದ ಸುಮಾರು 40 ಕಿ.ಮಿ.ದೂರದಲ್ಲಿರುವ ಕೂಡಲ ಸಂಗಮವು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು ಲಿಂಗಾಯತ ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ.