ಪ್ರಕೃತಿ ಎಂದರೆ ಸೃಷ್ಟಿ. ಬ್ರಹ್ಮಾಂಡದ ಅಸ್ತಿತ್ವಕ್ಕೆ ಕಾರಣವಾಗಿರುವ ಬುದ್ಧಿವಂತಿಕೆಯ ಮೂಲ ಸ್ವರೂಪ. ಭಗವದ್ಗೀತೆಯಲ್ಲಿ ಇದನ್ನು "ಮೂಲಭೂತ ಪ್ರೇರಕ ಶಕ್ತಿ" ಎಂದು ವಿವರಿಸಲಾಗಿದೆ. ಭೂಮಿಯ ಮೇಲೆ ನಾವು ನಮ್ಮ ಅನುಕೂಲಕ್ಕಾಗಿ ಅಥವಾ ಒಳ್ಳೆಯದಕ್ಕಾಗಿ ಬಳಸುವುದೆಲ್ಲವೂ ಪ್ರಕೃತಿಯಿಂದಲೇ ಉಡುಗೊರೆಯಾಗಿ ನೀಡಲ್ಪಟ್ಟಿದೆ. ಮರಗಳು, ಹೂವುಗಳು, ದೊಡ್ಡ ಕಣಿವೆಗಳು, ಸಾಗರಗಳು, ಪರ್ವತಗಳು, ಜಲಪಾತಗಳು, ವನ್ಯಜೀವಿಗಳು, ಇತ್ಯಾದಿಗಳಂತಹ ಅನೇಕ ಸುಂದರವಾದ ಮತ್ತು ಸುಂದರವಾದ ಭೂದೃಶ್ಯಗಳು ಭೂಮಿಯ ಮೇಲೆ ಇವೆ. ಸೂರ್ಯನ ಬೆಳಕು, ತಂಗಾಳಿ ಪ್ರಕೃತಿಯ ಭಾಗವಾಗಿದೆ. ಪ್ರಕೃತಿಯನ್ನು “ತಾಯಿ” ಎಂದು ನಾವು ಕರೆಯುತ್ತೇವೆ. ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಸುಮಾರು 500ರಷ್ಟು ಜಲಪಾತಗಳಿವೆ ಎನ್ನಲಾಗುತ್ತದೆ.
ಕರ್ನಾಟಕ ರಾಜ್ಯವು ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಜಗತ್ಪ್ರಸಿದ್ಧಿಯನ್ನು ಪಡೆದಿದೆ. ನಿತ್ಯ ಹರಿದ್ವರ್ಣಕಾಡು, ಎತ್ತ ನೋಡಿದರೂ ಮುಗಿಲೆತ್ತರಕ್ಕೆ ಬೆಳೆದು ನಿಂತ, ಮುಂದಿನ ಹಾದಿಯೇ ಕಾಣಿಸದಷ್ಟು ಒತ್ತಾಗಿ ಬೆಳೆದು ನಿಂತ ವೃಕ್ಷ ರಾಶಿ, ಅಲ್ಲಲ್ಲಿ ಕಂಡೂ ಕಾಣದೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳ ಸಪ್ಪಳ, ಕಾಡು ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ದೂರದ ಸೀತಾ ನದಿಯ ಜಲಪಾತದ ಝಳುಝಳು ಸದ್ದು ಇಂತಹ ಕಾನನದ ಹೆಬ್ಬಂಡೆಯನ್ನು ಸೀಳಿಕೊಂಡು ಸುಮಾರು 200 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ರಮಣೀಯ ತಾಣವೇ ಕೂಡ್ಲು ತೀರ್ಥ.
ಪುರಾಣಗಳ ಪ್ರಕಾರ ಸುಮಾರು ಸಾವಿರಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಋಷಿ ಮುನಿಗಳು ಮತ್ತು ಸನ್ಯಾಸಿಗಳು ಕುಳಿತು ಧ್ಯಾನ ಮಾಡುತ್ತಿದ್ದರು ಎಂಬ ಐತಿಹ್ಯವಿದೆ. ಕೂಡ್ಲು ತೀರ್ಥ ಜಲಪಾತ ಹೆಬ್ರಿಯಿಂದ 20 ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳವಾಗಿದ್ದು, ರಸ್ತೆ ಸಂಪರ್ಕದಿಂದ 4 ಕಿ.ಮೀ. ದೂರದಲ್ಲಿದೆ. 4 ಕಿ.ಮೀ. ಚಾರಣದ ನಂತರ ರಮ್ಯ ಮನೋಹರ ಜಲಪಾತವು ಎದುರುಗೊಳ್ಳುವುದು. ಚಾರಣದ ಮಧ್ಯ ಹಚ್ಚ ಹಸುರಿನ ಪರಿಸರವೂ ಮನಸ್ಸಿಗೆ ಮುದ ನೀಡುವುದು. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಪಡೆದಿರುವ ಆಗುಂಬೆಯ ದಟ್ಟ ಕಾನನದ ಕಾಲು ದಾರಿಯಲ್ಲಿ ನಡೆದೇ ಸಾಗಬೇಕಾಗಿದೆ. ಉಡುಪಿ ಜಿಲ್ಲೆಯಲ್ಲಿ ಹರಿಯುವ ಸೀತಾನದಿ ಪಶ್ಚಿಮಕ್ಕೆ ಹರಿಯುವ ನದಿಯಾಗಿದ್ದು,
ಈ ನದಿಯು ನರಸಿಂಹ ಪರ್ವತದ ಬಳಿ ಹುಟ್ಟಿಕೊಂಡು ಅಗುಂಬೆ ಕಾಡುಗಳ ಮೂಲಕ ಹಾದು ಹೆಬ್ರಿ, ಬಾರ್ಕೂರ್ ಬಳಿ ಹರಿಯುತ್ತಾ ಸುವರ್ಣ ನದಿಯ ಸಂಗಮವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಮಟ್ಟಕ್ಕೆ ಏರುತ್ತದೆ. ನದಿ ಮತ್ತು ಅದರ ಸಣ್ಣ ಉಪನದಿಗಳು ಕುಡ್ಲುಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ ಮುಂತಾದ ಹಲವಾರು ಜಲಪಾತಗಳನ್ನು ಸೃಷ್ಟಿ ಮಾಡಿದೆ. ಕೂಡ್ಲು ತೀರ್ಥ ಜಲಪಾತದ ಪ್ರವಾಸ ಕೈಗೊಳ್ಳಲು ಆಗಸ್ಟ್ನಿಂದ ಜನವರಿ ತಿಂಗಳು ಸೂಕ್ತ. ಯಾಕೆಂದರೆ ಈ ತಿಂಗಳಲ್ಲಿ ನೀರಿನ ಹರಿವು ಜಾಸ್ತಿ ಇರುವುದರಿಂದ ಜಲಪಾತ ವೀಕ್ಷಣೆಗೆ ಸಹಕಾರಿಯಾಗುತ್ತದೆ.
ಎಪ್ರಿಲ್- ಮೇ ತಿಂಗಳಲ್ಲೂ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಆದರೆ ನೀರಿನ ಪ್ರಮಾಣ ಕೊಂಚ ಕಡಿಮೆ ಇರುತ್ತದೆ. ಈ ಜಲಪಾತವು ಕಾಡಿನ ಮಧ್ಯ ಭಾಗದಲ್ಲಿ ಇರುವುದರಿಂದ ಯಾವುದೇ ಆಹಾರ ವ್ಯವಸ್ಥೆ ಇಲ್ಲಿ ಇರುವುದಿಲ್ಲ. ಮಳೆಗಾಲದಲ್ಲಿ ಚಾರಣ ಮಾಡುವಾಗ ಜಿಗಣೆ ಸಮಸ್ಯೆ ಮತ್ತು ನೀರಿನ ಹರಿವು ಹೆಚ್ಚಿರುವುದರಿಂದ ಪರ್ಯಾಯ ಕ್ರಮವನ್ನು ಕೈಗೊಳ್ಳುವುದು ಉತ್ತಮ. ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಈ ಜಲಪಾತ ವೀಕ್ಷಣೆಗೆ ಸಮಯಾವಕಾಶವನ್ನು ನೀಡಲಾಗಿದೆ.