image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೋವಿಗೆ ಜೀವದಾನ ಮಾಡಿ ಜನರ ಜೀವನಾಡಿಯಾದಳು ಈ ಗೋದಾವರಿ....!

ಗೋವಿಗೆ ಜೀವದಾನ ಮಾಡಿ ಜನರ ಜೀವನಾಡಿಯಾದಳು ಈ ಗೋದಾವರಿ....!

ಮನುಷ್ಯ ಪ್ರಕೃತಿಯ ಮುಂದೆ ತೃಣ ಸಮಾನ ಎನ್ನುವುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಈ ಪ್ರಕೃತಿಯನ್ನು ನಮಗೆ ದೇವರು ವರದಾನವಾಗಿ ನೀಡಿದ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿಂದಿನ ಸಂಚಿಕೆಯಲ್ಲಿ ನಾವು ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾದ ನದಿಗಳ ಬಗ್ಗೆ ಹೇಳುತ್ತಾ ಬಂದಿದ್ದೇವೆ. ನದಿಗಳು ಎಲ್ಲವೂ ಒಂದಕ್ಕಿಂತ ಒಂದು ವಿಶೇಷವಾಗಿ ನಮಗೆ ಕಾಣಿಸುತ್ತವೆ. ಉದ್ದ, ಅಗಲಗಳಲ್ಲಿ ಹೇಗೆ ವಿಭಿನ್ನವಾಗಿರುತ್ತದೋ ಹಾಗೆ ನದಿಗಳ ಹಿನ್ನಲೆಗಳು ಕೂಡ ವಿಭಿನ್ನವೆ.

ನಾವು ಇವತ್ತು ಹೇಳ ಹೊರಟಿರುವ ನದಿಯೇ ಗೋದಾವರಿ. ಗಂಗೆಯ ನಂತರ ಭಾರತದ ಎರಡನೇ ಅತಿ ಉದ್ದದ ನದಿಯಾಗಿದೆ. ಗೋದಾವರಿ ಅರೇಬಿಯನ್ ಸಮುದ್ರದಿಂದ 80 ಕಿ.ಮೀ ಬಂಗಾಳಕೊಲ್ಲಿಯಲ್ಲಿ ಸೇರುತ್ತದೆ. ಗೋದಾವರಿಯನ್ನು "ಗೌತಮಿ ಗಂಗಾ" ಅಂತ ಕರೆಯುವುದುಂಟು. ಈ ಹೆಸರಿನ ಹಿಂದೆ ಪೌರಾಣಿಕ ಹಿನ್ನಲೆಯಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಗೌತಮ ಮುನಿಗಳ ಆಶ್ರಮವಿತ್ತು. ದಕ್ಷಿಣದ ಭಾಗವೆಲ್ಲ ಅನಾವೃಷ್ಟಿಗೆ ಒಳಗಾಗಿದ್ದರೂ ಗೌತಮರ ಆಶ್ರಮ ಮಾತ್ರ ಸಮೃದ್ದವಾಗಿತ್ತು. ಇದೇ ಸಮಯದಲ್ಲಿ ಕೈಲಾಸದಲ್ಲಿ ಪಾರ್ವತಿಗೆ ಗಂಗೆಯ ವಿಷಯದಲ್ಲಿ ಅಸೂಯೆ ಹೆಚ್ಚಾಯಿತು.

ಗಂಗೆಯು ಶಿವನ ಜಟೆಯಲ್ಲಿ ವಾಸವಾಗಿರುವುದು ಇಷ್ಟವಿರಲ್ಲ. ತನ್ನ ಇಂಗಿತವನ್ನು ಮಗನಾದ ಗಣಪತಿಗೆ ತಿಳಿಸಿದಳು. ಬಳಿಕ ಗಣಪತಿ, ಪಾರ್ವತಿ ಸೇರಿ ಜಯಾ ಎಂಬ ಪಾರ್ವತಿಯ ದಾಸಿಯನ್ನು ಗೋರೂಪದಲ್ಲಿ ಗೌತಮರ ಹೊಲಕ್ಕೆ ಕಳುಹಿಸಲಾಯಿತು. ಗೌತಮರು ಗೋವನ್ನು ಓಡಿಸುವ ಪ್ರಯತ್ನ ಮಾಡಿದಾಗ, ಗಣಪತಿ, ಪಾರ್ವತಿಯರ ಅಣತಿಯಂತೆ ಗೋ ರೂಪದಲ್ಲಿದ್ದ ದಾಸಿಯು ಪ್ರಾಣತ್ಯಾಗ ಮಾಡುತ್ತಾಳೆ. ಇದರಿಂದ ಗೌತಮರಿಗೆ ಗೋಹತ್ಯಾ ಶಾಪ ತಗಲುತ್ತದೆ. ಇದರ ಪರಿಹಾರಾರ್ಥವಾಗಿ ಗಣೇಶ ಪಂಡಿತನ ರೂಪದಲ್ಲಿ ಬಂದ ಗಣಪತಿಯು ಗೌತಮ ಋಷಿಗಳಿಗೆ " ಶಂಕರನ ಜಟೆಯಲ್ಲಿರುವ ಗಂಗೆಯನ್ನು ಗೋವಿನ ಮೇಲೆ ಹರಿಸಿದರೆ ಪಾಪ ಪರಿಹಾರ ಆದೀತು ಎನ್ನುತ್ತಾನೆ.

ಇದರಂತೆ ಗೌತಮರು ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಗಂಗೆಯನ್ನು ಬೇಡಿದರು. ಇವರ ಬೇಡಿಕೆಯನ್ನು ಮನ್ನಿಸಿದ ಶಿವನು ಬ್ರಹ್ಮಗಿರಿಯಲ್ಲಿ ಗಂಗೆಯನ್ನು ಹರಿಸಿದನು. ಮಾಘ ಶುದ್ಧ ದಶಮಿಯಂದು ಗಂಗೆ ಬ್ರಹ್ಮಗಿರಿಯಿಂದ ಇಳಿದಳು. ಗಂಗೆಯ ಮೈಸೋಕಿದೊಡನೆ ಗೋವಿನ ಜೀವ ಮರಳಿತು, ಗೌತಮರ ಪಾಪ ಕಳೆಯಿತು.

ಗೋವಿಗೆ ಜೀವದಾನ ಮಾಡಿದ್ದರಿಂದ ಗೋದಾ ಎಂಬ ಹೆಸರಿನಿಂದ ಕರೆಯಲಾಯಿತು. ಮುಂದೆ ಗೋದಾವರಿಯಾಗಿ ಜನಜ್ಜನಿತವಾಯಿತು. ಗೋದೆಯ ತಟದಲ್ಲಿ ಜ್ಯೋತಿರ್ಲಿಂಗಳಲ್ಲಿ ಒಂದಾದ ತ್ರೆಯಂಬಕೇಶ್ವರ ದೇವಾಲಯವಿದೆ. ಮಹಾರಾಷ್ಟ್ರದ ಮತ್ತು ಆಂದ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ಜೀವನಾಧಾರವಾಗಿದ್ದಾಳೆ ಈ ಗೋಧಾವರಿ. ಮಾರ್ಗಮಧ್ಯದಲ್ಲಿ ಶಬರಿ, ಮುಳಾ, ವರ್ಧಾ, ಇಂದ್ರಾವತಿ ಹೀಗೆ ಹಲವಾರು ನದಿಗಳನ್ನು ತನ್ನ ಒಡಲಿನಲ್ಲಿ ಸೇರಿಸಿಕೊಂಡು ಮುನ್ನಡೆಯುತ್ತಾಳೆ.

ಮುಂದೆ  ಧವಳೇಶ್ವರದಲ್ಲಿ ಎರಡು ಕವಲುಗಳಾಗಿದ್ದಾಳೆ. ಈ ಕವಲುಗಳಿಗೆ ಗೌತಮಿ ಗೋದಾ ಮತ್ತು ವಶಿಷ್ಠಾಗೋದಾ ಎನ್ನುತ್ತಾರೆ. ಶ್ರೀ ರಾಮಚಂದ್ರರು ಗೋದಾವರಿ ತೀರದ ಪಂಚವಟಿಯಲ್ಲಿ ಬಹುಕಾಲ ತಂಗಿದ್ದರು ಎಂಬುದನ್ನು ನಾವು ರಾಮಾಯಣದಲ್ಲಿ ಓದಿದ್ದೇವೆ. ಮಹಾರಾಷ್ಟದ ಗೋದಾವರಿ ತಟದಲ್ಲಿ ಪೈಠನ್ ಅಥವಾ ಪ್ರತಿಷ್ಟಾಪುರ ಮತ್ತು ನಾಂದೇಡ್ ಎಂಬ ತೀರ್ಥಕ್ಷೇತ್ರಗಳಿವೆ. ಪೈಠನ್‌ನನ್ನು ದಕ್ಷಿಣದ ಕಾಶಿ ಎಂದು ಕರೆಯುತ್ತಾರೆ.

ಇನ್ನು ಆಂಧ್ರದ ಭದ್ರಾಚಲಂ ರಾಮಾಯಣ ಕಾಲದಿಂದಲೂ ಪ್ರಸಿದ್ದವಾದ ಕ್ಷೇತ್ರ. ಗೋದೆಯ ತಟದಲ್ಲಿರುವ ಧವಳೇಶ್ವರಂ ಇನ್ನೊಂದು ತೀರ್ಥಕ್ಷೇತ್ರ. ಇಲ್ಲಿ ಮಾಘಮಾಸದಲ್ಲಿ ಬಹಳಷ್ಟು ಯಾತ್ರಿಕರು ಸೇರುತ್ತಾರೆ. ಇಲ್ಲಿನ ಶಿಖರದಲ್ಲಿ ನಾರದರು ವಾಸವಿದ್ದರು ಎನ್ನುವ ಪ್ರತೀತಿ ಕೂಡ ಇದೆ. ಭದ್ರಾಚಲಂ ಬಳಿಕ ಸಿಗುವ ರಾಜಮಹೇಂದ್ರಿ ಮತ್ತು ಕೋಟಿಪಲ್ಲಿಗಳಲ್ಲಿ ಹದಿಮೂರು ವರ್ಷಗಳಿಗೊಮ್ಮೆ "ಪುಷ್ಕರಂ" ಉತ್ಸವ ನಡೆಯುತ್ತದೆ. ಮುಂದೆ ಸಾಗರವನ್ನು ಸೇರುವ ಮುನ್ನ ಏಳು ಕವಲುಗಾಗಿ, ಸುಮಾರು 1,15,000 ಚ.ಮೈಲಿಗಳಷ್ಟು ಪ್ರದೇಶವನ್ನು ಹಸಿರಾಗಿಸಿ ಬಂಗಾಳಕೊಲ್ಲಿಯಲ್ಲಿ ವಿಲೀನಗೊಂಡಿದ್ದಾಳೆ ಈ ನಮ್ಮ ಗೋದಾವರಿ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ