image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಮುನಾ

ಯಮುನಾ

ನಾರದ ಪುರಾಣದ "ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು" ಎನ್ನುವ ಶ್ಲೋಕದಲ್ಲಿ ನದಿಗಳ ಶ್ರೇಷ್ಟತೆಯನ್ನು ಸಾರಿದ್ದಾರೆ. ಭಾರತದಲ್ಲಿ ಎಲ್ಲಾ ನದಿಗಳು ಕುಲ ಪರ್ವತದಲ್ಲಿ ಹುಟ್ಟಿವೆ. ನಮ್ಮ ಭಾರತದ ಶ್ರೇಷ್ಠ ನದಿಗಳಲ್ಲಿ ಯಮುನೆಯೂ ಒಂದು. ಯಮುನೆಯನ್ನು ಜಮುನೆ ಎಂದೂ ಕರೆಯುವುದುಂಟು. ಗಂಗೆಯಂತೆ ಇವಳೂ ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 6387 ಮೀ. ಎತ್ತರದಲ್ಲಿ ಜನಿಸಿ, ಉತ್ತರ ಭಾರತದ ಬಹುದೊಡ್ಡ ಬಾಗಕ್ಕೆ ಹಸಿರುಣಿದ್ದಾಳೆ.

ಹಿಮಾಲಯದ ಕಳಿಂದ ಪರ್ವತ ಇವಳ ಉಗಮ ಸ್ಥಾನ. ಹಾಗಾಗಿಯೇ ಅವಳನ್ನು ಕಾಳಿಂದಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕಳಿಂದ ಪರ್ವತದಿಂದ ಮುಂದೆ ಸುಮಾರು 150 ಕಿ.ಮೀ ದುರ್ಗಮ ದಾರಿಯನ್ನು ಹಾದು ಬರುತ್ತಾಳೆ. ಹಾಗೆ ಬರುವಾಗ ಸುಮಾರು ಎಂಟಕ್ಕೂ ಹೆಚ್ಚು ನದಿಗಳು ಇವಳ ಒಡಲನ್ನು ಸೇರುತ್ತದೆ. ಉತ್ತರಕಾಂಡ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಹರಿಯಾಣ, ದೆಹಲಿಯಲ್ಲಿ ಸಂಚರಿಸುತ್ತಾಳೆ. ಇವಳ ತೀರದಲ್ಲಿ ದೆಹಲಿ, ಬಾಗವತ್, ಬೃಂದಾವನ್, ಮಥುರಾ, ಆಗ್ರಾ ಮೊದಲಾದ ನಗರಗಳಿವೆ. ಪ್ರಯಾಗದಲ್ಲಿ ಗಂಗೆ ಹಾಗೂ ಗುಪ್ತಗಾಮಿನಿ ಸರಸ್ವತಿಯೊಡನೆ ಸೇರಿಕೊಳ್ಳುತ್ತಾಳೆ. ಇಲ್ಲಿ ಸ್ನಾನ ಮಾಡಿದರೆ ಪೂರ್ವ ಜನ್ಮದ ಪಾಪ ಕಳೆಯುತ್ತದೆ ಎನ್ನುವ ನಂಬಿಕೆಯಿದೆ. ಮುಂದೆ ಸುಮಾರು 1350 ಕಿ.ಮೀಗಿಂತಲೂ ಹೆಚ್ಚು ದೂರ ಕ್ರಮಿಸಿ ಬಂಗಾಳಕೊಲ್ಲಿಯನ್ನು ಸೇರಿಕೊಳ್ಳುತ್ತಾಳೆ. ಯಮುನೆಯ ಬಗ್ಗೆ ನಮ್ಮ ಪುರಾಣ ಗ್ರಂಥಗಳಲ್ಲಿ ಉಲ್ಲೇಕವಿದೆ. ಯಮುನೆಯ ತಟದಲ್ಲಿ ಮಥುರಾ ನಗರವಿದ್ದ ಬಗ್ಗೆ ರಾಮಾಯಣದಲ್ಲಿ ಉಲ್ಲೆಖಿತವಾದರೆ, ಪಾಂಡವರು ಖಾಂಡವ ದಹನ ಮಾಡಿ ಇಂದ್ರಪ್ರಸ್ಥವನ್ನು ಯಮೂನಾ ತೀರದಲ್ಲಿ ನಿರ್ಮಸಿರುವ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ. ಭಾರತದ ಇಂದಿನ ರಾಜಧಾನಿ ದೆಹಲಿಯೂ ಯಮುನೆಯ ತಟದಲ್ಲೆ ಇದೆ. ಯಮುನೆಯ ತೀರದಲ್ಲಿ ಗಾಂಧಿ, ನೆಹರೂ, ಲಾಲ್ ಬಹದ್ದೂರ ಶಾಸ್ತಿçಯವರ ಸಮಾದಿಯಿದೆ. ಯಮುನೆಯನ್ನು ಕೃಷ್ಣವರ್ಣೆ ಅಂತ ಪುರಾಣಗಳಲ್ಲಿ ಕರೆದಿದ್ದಾರೆ. ಯಮುನೆಯು ಸಾಕಷ್ಟು ವಿಸ್ತಾರ ಭೂಪ್ರದೇಶಕ್ಕೆ ನೀರುಣಿಸಿದ್ದಾಳೆ, ಪುರಾಣಗಳನ್ನು ಕೆದಕಿದಾಗ ಯಮುನೆಯು ಸೂರ್ಯನ ಮಗಳು, ಯಮನ ಸಹೋದರಿ ಎನ್ನುವ ಬಗ್ಗೆ ಉಲ್ಲೇಖವಿದೆ. ಕಾರ್ತಿಕ ಶುಕ್ಲ ಬಿದಿಗೆಯಂದು ಸಹೋದರ ಸಹೋದರಿ ಹಬ್ಬವನ್ನಾಗಿ ಆಚರಿಸುವುದರ ಹಿಂದೆ ಯಮುನೆಯ ಐತಿಹ್ಯವಿದೆ.

ಕಾರ್ತಿಕ ಶುಕ್ಲ ಬಿದಿಗೆಯಂದು ಯಮರಾಜನು ತನ್ನ ತಂಗಿ ಯಮುನೆಯ ಮನೆಗೆ ಬರುತ್ತಾನೆ, ಅಣ್ಣನನ್ನು ಸತ್ಕರಿಸಿದಾಗ ಯಮನು ಸಂತುಷ್ಟನಾಗಿ ತಂಗಿಗೆ ಉಡುಗೊರೆಯನಿತ್ತ. ಈ ಯಮ ದ್ವಿತೀಯದಂದು ಮಥುರೆಯಲ್ಲಿ ಯಮುನಾ ಸ್ನಾನ ಪವಿತ್ರ. ಗಂಗಾಸ್ನಾನಕ್ಕೆ ವೈಶಾಖ ಮಾಸ ಹೇಗೆ ಪವಿತ್ರವೋ ಹಾಗೆ ಯಮುನಾ ಸ್ನಾನಕ್ಕೆ ಕಾರ್ತಿಕ ಮಾಸ ಪವಿತ್ರ. ಯಮುನಾ ನದಿಯ ನೀರು ಸೇವಿಸಿದರೆ ಸೋಮಯಾಗದ ಫಲವಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ವೃಂದಾವನದ ಖೇಸಿ ಘಾಟ್‌ನಲ್ಲಿ ನದಿ ತೀರವು ಪವಿತ್ರವೆಂಬ ಭಾವನೆಯಿದೆ ಕಾರಣ ದ್ವಾಪರಯುಗದಲ್ಲಿ ಶ್ರೀಕೃಷ್ಣನು ಖೇಸಿ ಎಂಬ ರಾಕ್ಷಸಿಯನ್ನು ಕೊಂದು ಇಲ್ಲಿ ಸ್ನಾನ ಮಾಡಿದನಂತೆ ಹಾಗಾಗಿ ಇಲ್ಲಿ ಸ್ನಾನ ಮಾಡಿದರೆ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಇಲ್ಲಿ ಹಲವಾರ ಘಾಟ್‌ಗಳಿವೆ ಹಾಗೆ ಬೆಳಿಗ್ಗೆ ಸಂಜೆ ಆರತಿ ಸೇವೆಯು ಇದೆ. ಯಮುನಾ ತೀರದ ಪ್ರಾಕೃತಿಕ ಸೊಬಗು ಅದ್ಧುತ. ಗಂಗೆಗೆ ಹೋಲಿಸಿದರೆ ಯಮುನೆ ಹಿರಿಯವಳಾಗಿ, ಗಾಂಭರ‍್ಯದಿಂದ ಕಾಣಿಸುತ್ತಾಳೆ. ಭಾರತೀಯ ಸಂಸ್ಕೃತಿಯಲ್ಲಿ ಅಚ್ಚಳಿಯದೆ, ಜನ ಮಾನಸದಲ್ಲಿ ಪೂಜ್ಯನೀಯವಾಗಿ ಮೆರೆಯುತ್ತಿದ್ದಾಳೆ ಈ ಯಮುನೆ. ಆದರೆ ಇಂದು ಯಮುನೆ ಕಲುಷಿತಗೊಳ್ಳುತ್ತಿದ್ದಾಳೆ ಎನ್ನುವುದು ಬೇಸರದ ಸಂಗತಿ.

Category
ಕರಾವಳಿ ತರಂಗಿಣಿ