image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಳಿವಿನಂಚಿನಲ್ಲಿರುವ ಪ್ರಾಣಿ- ಪಕ್ಷಿಗಳ ಆವಾಸ ಸ್ಥಾನವಾಗಿರುವ 'ಹೆಮೀಸ್ ರಾಷ್ಟ್ರೀಯ' ಉದ್ಯಾನವನದ ಬಗ್ಗೆ ತಿಳಿದಿದೆಯೇ...?

ಅಳಿವಿನಂಚಿನಲ್ಲಿರುವ ಪ್ರಾಣಿ- ಪಕ್ಷಿಗಳ ಆವಾಸ ಸ್ಥಾನವಾಗಿರುವ 'ಹೆಮೀಸ್ ರಾಷ್ಟ್ರೀಯ' ಉದ್ಯಾನವನದ ಬಗ್ಗೆ ತಿಳಿದಿದೆಯೇ...?

ಪರ್ವತಗಳ ಮಡಿಲಲ್ಲಿ ನೆಲೆಸಿರುವ ಸಮುದ್ರ ಮಟ್ಟದಿಂದ 3000-6000 ಮೀಟರ್ ಎತ್ತರದ ವ್ಯಾಪ್ತಿಯಲ್ಲಿರುವ ಭಾರತದ ಅತಿ ಎತ್ತರದ ರಾಷ್ಟ್ರೀಯ ಉದ್ಯಾನವನವೇ "ಹೆಮಿಸ್ ರಾಷ್ಟ್ರೀಯ ಉದ್ಯಾನವನ".ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೆಮ್ಮೆಯಾಗಿದ್ದು, ಭಾರತದಲ್ಲಿ ಅತಿ ದೊಡ್ಡ ಅಧಿಸೂಚಿತ ಸಂರಕ್ಷಿತ ಪ್ರದೇಶವಾಗಿದೆ ಮತ್ತು ಹಿಮಾಲಯದ ಉತ್ತರಕ್ಕೆ, ನಿಖರವಾಗಿ ಪೂರ್ವ ಲಡಾಖ್‌ನಲ್ಲಿದೆ. 600 ಚ.ಕಿ.ಮೀ ಪ್ರದೇಶದ ಹೆಮಿಸ್ ರಾಷ್ಟ್ರೀಯ ಉದ್ಯಾನವನವು ಲೇಹ್‌ನಿಂದ ಕೇವಲ 30 ಕಿ.ಮೀ ದೂರದಲ್ಲಿದೆ.

ಇದು ಹಿಮ ಚಿರತೆಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಒಟ್ಟು 4400 ಚದರ ಕಿಲೋ ಮೀಟರ್ ವಿಸ್ತೀರ್ಣದೊಂದಿಗೆ, ದಕ್ಷಿಣ ಏಷ್ಯಾದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. 400 ವರ್ಷಗಳಷ್ಟು ಹಳೆಯದಾದ ಹೆಮಿಸ್ ಮಠವು ಉದ್ಯಾನವನದ ಗಡಿಯೊಳಗೆ ಇರುವುದರಿಂದ ಈ ಹೆಸರನ್ನು ಪಡೆದುಕೊಂಡಿದೆ. ಈ ಪ್ರದೇಶವು ಮಳೆಯ ನೆರಳಿನಿಂದ ಕೂಡಿದೆ, ಏಕೆಂದರೆ ಇದು ಹಿಮಾಲಯದಿಂದ ಆಶ್ರಯ ಪಡೆದಿದೆ. ಆದ್ದರಿಂದ ಉದ್ಯಾನವು ಪ್ರಧಾನವಾಗಿ ಒಣ ಕಾಡುಗಳನ್ನು ಹೊಂದಿದ್ದು, ಪರ್ವತದ ಮೇಲಿನ ತೇವಾಂಶವುಳ್ಳ ಇಳಿಜಾರುಗಳಲ್ಲಿ ಸಸ್ಯವರ್ಗದ ಪ್ರಕಾರವು ಭಿನ್ನವಾಗಿರುತ್ತದೆ. ಈ ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ವಿವಿಧ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳು ಕಂಡುಬರುತ್ತವೆ. ಈರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ 1500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.

ಉದ್ಯಾನವನವು ಶಿಂಗೋ, ಚಿಲ್ಲಿಂಗಾ, ಯುರುತ್ಸೆ, ರುಂಬಕ್ ಮತ್ತು ಸ್ಕು-ಕಾಯಾ ಎಂಬ 5 ಹಳ್ಳಿಗಳಿಂದ ಸುತ್ತುವರಿದಿದೆ. ದಾರಿಯಲ್ಲಿ ಪ್ರಾರ್ಥನಾ ಧ್ವಜಗಳಿವೆ. ಅದರ ಗಡಿಗಳಲ್ಲಿ ಸಿಂಧೂ ಮತ್ತು ಜಸ್ಕರ್ ನದಿ ಹರಿಯುವುದನ್ನು ನೀವು ಕಾಣಬಹುದು. ಹೆಮಿಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 10 ಪ್ರತಿಶತ ವಲಯವು ಪೊದೆಗಳು, ಹುಲ್ಲುಗಾವಲುಗಳು ಮತ್ತು ಪ್ರತ್ಯೇಕವಾದ ಮರಗಳಿಂದ ಆವೃತವಾಗಿದೆ. ಎತ್ತರಕ್ಕೆ ಹೋದಂತೆ ಸಸ್ಯವರ್ಗದ ಪ್ರಕಾರವು ಬದಲಾಗುತ್ತದೆ. ಹುಲ್ಲುಗಾವಲು ಮರಗಳು, ಜುನಿಪರ್, ಲಾಯ್ಡ್, ವೆರೋನಿಕಾ ಕೆಲವು ಪ್ರಭೇದಗಳು. ಪಾರ್ಕ್ ಪ್ರದೇಶದಲ್ಲಿ 15 ಅಪರೂಪದ ಔಷಧೀಯ ಸಸ್ಯಗಳು ಕಂಡುಬಂದಿವೆ. ಹೆಮಿಸ್ ರಾಷ್ಟ್ರೀಯ ಉದ್ಯಾನವು ಅನೇಕ ಅಪರೂಪದ ಜಾತಿಯ ಪ್ರಾಣಿಗಳಿಗೆ ವಿಶೇಷವಾಗಿ ಜನಪ್ರಿಯವಾಗಿದೆ. ಇವುಗಳು ನಿರ್ದಿಷ್ಟ ಎತ್ತರದಲ್ಲಿ ಕಂಡುಬರುತ್ತವೆ ಮತ್ತು ಹೆಮಿಸ್‌ನ ಭೌಗೋಳಿಕ ವೈಶಿಷ್ಟ್ಯಗಳು ಅವುಗಳಿಗೆ ಸೂಕ್ತವಾದ ನೆಲೆಯಾಗಿದೆ.

ಅವುಗಳಲ್ಲಿ ಶಾಪು, ಭಾರಲ್, ಹಿಮ ಚಿರತೆ, ಯುರೇಷಿಯನ್ ಕಂದು ಕರಡಿ, ಕೆಂಪು ನರಿ, ಹಿಮಾಲಯನ್ ಮೌಸ್ ಮೊಲ, ಪಲ್ಲಾಸ್ ಬೆಕ್ಕು, ಐಬೆಕ್ಸ್. ಉದ್ಯಾನದಲ್ಲಿ ಸುಮಾರು ಹದಿನಾರು ಜಾತಿಯ ಸಸ್ತನಿಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಅಳಿವಿನಂಚಿನಲ್ಲಿವೆ. ಹೆಮಿಸ್ ಪಾರ್ಕ್ ಭಾರತದಲ್ಲಿ ನೀವು ಶಾಪೋ ಅಥವಾ ಯುರಿಯಲ್‌ನ್ನು ಕಾಣುವ ಏಕೈಕ ಸ್ಥಳವಾಗಿದೆ. ಇದು ಸ್ಥಳೀಯವಾಗಿ ಅರ್ಕಾರ್ಸ್ ಎಂದೂ ಕರೆಯಲ್ಪಡುವ ಕಾಡು ಕುರಿಗಳ ಉಪಜಾತಿಯಾಗಿದೆ. ರಾಷ್ಟ್ರೀಯ ಉದ್ಯಾನವನದ ರುಂಬಕ್ ಕಣಿವೆ ಪ್ರದೇಶವು ಪಕ್ಷಿವಿಹಾರಕ್ಕೆ ಉತ್ತಮವಾಗಿದ್ದು, ಇಲ್ಲಿ ಗೋಲ್ಡನ್ ಹದ್ದು, ಹಿಮಾಲಯನ್ ಸ್ನೋ ಕಾಕ್, ಕಪ್ಪು ರೆಕ್ಕೆಯ ಸ್ನೋಫಿಂಚ್, ಚುಕರ್ ಪ್ಯಾಟ್ರಿಡ್ಜ್, ರಣಹದ್ದುಗಳ ವಿವಿಧ ಕುಟುಂಬಗಳು ಮುಂತಾದ 73 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಹೆಮಿಸ್ ಹೊರತು ಪಡಿಸಿ, ಚಾಂಗ್‌ತಾಂಗ್ ವನ್ಯಜೀವಿ ಅಭಯಾರಣ್ಯ ಮತ್ತು ಸಿಕ್ಕಿಂನಲ್ಲಿ ಪ್ರಸ್ತಾವಿತ ತ್ಸೋಲಾಮೊ ಶೀತಲ ಮರುಭೂಮಿ ಸಂರಕ್ಷಣಾ ಪ್ರದೇಶವನ್ನೋಳಗೊಂಡಿರುವ ಪ್ಯಾಲೆರ್ಕ್ಟಿಕ್ ಪರಿಸರ ವಲಯದ ಭಾಗವಾಗಿದೆ.

ಸಿಂಧೂ ನದಿಯು ಹೆಮಿಸ್ ಗಡಿಯ ಉತ್ತರದಲ್ಲಿ ಹರಿಯುತ್ತದೆ. ಉದ್ಯಾನವನವು ಕೆಳ ಝನ್ಸ್ಕರ್ ಕಣಿವೆಯಲ್ಲಿನ ಜಲಾನಯನ ಪ್ರದೇಶದ ಪ್ರಮುಖ ಭಾಗವನ್ನು ಒಳಗೊಂಡಿದೆ. ಮಾರ್ಖಾ, ಸುಮ್ದಾಹ್, ರುಂಬಕ್ ಮತ್ತು ಝನ್ಸ್ಕರ್ ಶ್ರೇಣಿಯ ಭಾಗಗಳು ಇಲ್ಲಿ ಜಲಾನಯನ ಪ್ರದೇಶವಾಗಿದ್ದು, ಇದನ್ನು 4 ಫೆಬ್ರವರಿ 1981ರಂದು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಇಲ್ಲಿ ಉತ್ತರ ಭಾರತದಲ್ಲಿಯೇ ಅತೀ ದೊಡ್ಡ ಮಠವು ಲೇಹ್‌ನಿಂದ ಸುಮಾರು 45 ಕಿಮೀ ದೂರದಲ್ಲಿದೆ. ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ದೀರ್ಘಕಾಲದ ಐತಿಹಾಸಿಕ ಹಾದಿಗಳ ಸ್ಥಳವಾಗಿದೆ.  ಇದು 1000ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳಿಗೆ ನೆಲೆಯಾಗಿದ್ದು, ಮಠದ ಒಳಗೆ ಪ್ರಾಚೀನ ಕಲಾಕೃತಿಗಳು, ಬುದ್ಧನ ಪ್ರತಿಮೆಗಳು, ಸ್ತೂಪಗಳ ದೊಡ್ಡ ಸಂಗ್ರಹಗಳಿವೆ. ಗೋತ್ಸಾಂಗ್ ಗೊಂಪಾವು ಚಾರಣ ಪ್ರಿಯರಿಗೆ ನೆಚ್ಚಿನ ತಾಣ, ಗೋತ್ಸಾಂಗ್ ಗೊಂಪಾ ಚಾರಣಕ್ಕೆ ಮೊದಲು ವಿಶ್ರಾಂತಿಯ ತಾಣವಾಗಿರುತ್ತದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ