ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಂತಹ ರಾಜ್ಯಗಳಲ್ಲಿ ಮೈಮನ ರೋಮಾಂಚನಗೊಳಿಸುವಂತಹ ಸಾಕಷ್ಟು ಕಣಿವೆಗಳನ್ನು ಕಾಣಬಹುದು. ಇದಕ್ಕೆ ಕಾರಣ ಹಿಮಾಲಯ ಪರ್ವತಗಳಿಗೆ ಸಾಕಷ್ಟು ಹತ್ತಿರದಲ್ಲಿರುವುದೂ ಕೂಡ ಆಗಿರಬಹುದು. ಇಂತಹ ಕಣಿವೆ ಪ್ರದೇಶಗಳನ್ನು ವೀಕ್ಷಿಸುವುದೆಂದರೆ ಅದೊಂದು ಅದ್ಬುತವಾದ ಅನುಭವ ಎಂದರೆ ತಪ್ಪಾಗಲಾರದು. ಕಾಶ್ಮೀರವನ್ನು ದೇವರ ಸರ್ವೋತ್ಕೃಷ್ಟವಾದ ವಾಸಸ್ಥಾನವೆಂದು ನಂಬಲಾಗುತ್ತದೆ. ಅಂತಹ ಕಣಿವೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಬೇತಾಬ್ ಕಣಿವೆಯೂ ಪ್ರಮುಖವಾದುದುದು. ಈ ಕಣಿವೆಗೆ ಬೇತಾಬ್ ಎಂದು ಹೆಸರು ಬರಲು ಕಾರಣ 1983 ರಲ್ಲಿ ಬಿಡುಗಡೆಗೊಂಡಿದ್ದ "ಬೇತಾಬ್" ಎಂಬ ಹಿಂದಿ ಚಿತ್ರವನ್ನು ಈ ಕಣಿವೆ ಪ್ರದೇಶದಲ್ಲಿ ಚಿತ್ರೀಕರಿಸಿರುವುದು. ಇದನ್ನು ಮೊಘಲರ ಸಮಯದಲ್ಲಿ ಹಾಗನ್ ಕಣಿವೆ ಎಂದು ಕರೆಯಲಾಗುತ್ತಿತ್ತು. ಇದು 1960ರಿಂದಲೂ ಚಲನಚಿತ್ರ ಮಾಡುವವರಿಗೆ ಒಂದು ಅಚ್ಚುಮೆಚ್ಚಿನ ಸ್ಥಳವಾಗಿದೆ.
ಇಲ್ಲಿಯ ಕೆಲವು ಸ್ಥಳಗಳಿಗೆ ಬಾಲಿವುಡ್ ಚಲನಚಿತ್ರಗಳ ಹೆಸರಿಡಲಾಗಿದೆ. ಈ ಕಣಿವೆಯ ಮಧ್ಯದಲ್ಲಿ ಪ್ರಶಾಂತವಾಗಿ ಹರಿಯುವ ಲಿಡ್ಡರ್ ನದಿ ಹಾಗೂ ಅದರ ಸುತ್ತಮುತ್ತಲಿನ ಸ್ವಚ್ಛ ಹಾಗೂ ರಮಣೀಯ ದೃಶ್ಯಾವಳಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸುಂದರವಾದ ಹಿಮದಿಂದ ಆವೃತವಾದ ಮತ್ತು ಹಸಿರು ಹುಲ್ಲುಗಾವಲುಗಳಿಂದ ಸುತ್ತುವರಿಯಲ್ಪಟ್ಟ ಬೇತಾಬ್ ಕಣಿವೆಯು ಎಂತಹ ಮನಸ್ಥಿತಿಯವರನ್ನೂ ಮಂತ್ರಮುಗ್ದಗೊಳಿಸುವುದರಲ್ಲಿ ಸಂದೇಹವಿಲ್ಲ. ಬೇತಾಬ್ ಕಣಿವೆಯ ಪ್ರತಿಯೊಂದು ಮೂಲೆಯಲ್ಲಿಯೂ ಶಾಂತತೆ ಮತ್ತು ಪ್ರಶಾಂತತೆಯ ಸಾರವನ್ನು ಅನುಭವಿಸ ಬಹುದಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಹತ್ತಿರದ ಲ್ಲಿರುವ ಬೇತಾಬ್ ಕಣಿವೆಯನ್ನು ಪ್ರತೀ ವರ್ಷ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಇನ್ನೂ ಹಲವು ಮನಮೋಹಕ ಪ್ರದೇಶಗಳಿವೆ. ಅವುಗಳಲ್ಲಿ ಲಿಡ್ಡರ್ ನದಿ, ಮೊನ್ನೆ ಮೊನ್ನೆಯಷ್ಟೆ ಭಯೋತ್ಪಾದಕರ ಪೈಶಾಚಿಕತೆಗೆ ಸಾಕ್ಷಿಯಾದ ಪಹಲ್ಗಾಮ್, ಒವೆರಾರು ವನ್ಯಜೀವಿ ಧಾಮ, ತುಲಿಯನ್ ಸರೋವರ ಪ್ರಮುಖವಾದುದು. ಬೇತಾಬ್ ಕಣಿವೆಯಲ್ಲಿ ಛಾರಣಿಗರನ್ನು ಕೂಡ ಕಾಣಬಹುದು. ಯಾಕೆಂದರೆ ಈ ಪ್ರದೇಶ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಬೇತಾಬ್ ಕಣಿವೆಯು ಆಕಾಶದೆತ್ತರದ ಪರ್ವತಗಳಿಂದ ಸುತ್ತುವರಿದಿರುವುದರಿಂದ ಇದರ ತಪ್ಪಲಿನಲ್ಲಿ ಚಾರುಣಿಗರಿಗೆ ಶಿಬಿರ ಹೂಡಲು ಅನುಕೂಲಕರವಾಗಿದೆ. ಇಲ್ಲಿ ಕುದುರೆ ಸವಾರಿ ಮತ್ತು ನದಿಗಳಲ್ಲಿ ವಿಹಾರವನ್ನೂ ಕೂಡ ಬೇತಾಬ್ ಕಣಿವೆಯ ಸುತ್ತಲು ಮಾಡಬಹುದಾಗಿದೆ. ಇಲ್ಲಿಗೆ ಜಗತ್ತಿನಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ. ವರ್ಷವಿಡೀ ತಾಪಮಾನ ಮತ್ತು ಹವಾಮಾನವು ಅನುಕೂಲಕರವಾಗಿರುವುದರಿಂದ ಬೇತಾಬ್ ಕಣಿವೆಯನ್ನು ವರ್ಷದ ಯಾವುದೇ ಸಮಯದಲ್ಲಿಯೂ ಭೇಟಿ ಕೊಡಬಹುದಾಗಿದೆ. ಇದೊಂದು ಪ್ರವಾಸಿಗರ ಬಹಮೆಚ್ಚಿನ ಬೇಸಿಗೆಯ ತಾಣವಾಗಿದು ವುದರಿಂದ ಈ ಸ್ಥಳವು ಬೇಸಿಗೆಯ ಸಮಯದಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳುವುದರಲ್ಲಿ ನಿರತವಾಗಿರುತ್ತದೆ. ಬೇತಾಬ್ ಕಣಿವೆಗೆ ಶ್ರೀನಗರದ ವಿಮಾನ ನಿಲ್ದಾಣದಿಂದ ಸುಮಾರು 96 ಕಿ.ಮೀ ದೂರವಷ್ಟೆ. ಇಲ್ಲಿಂದ ಬಾಡಿಗೆ ವಾಹನದ ಮೂಲಕ ಬೇತಾಬ್ ಕಣಿವೆಗೆ ಪ್ರಯಾಣಿಸಬಹುದಾಗಿದೆ. ಬೇತಾಬ್ ಕಣೀವೆಗೆ ರೈಲಿನ ಮುಖಾಂತರವು ಹೋಗಬಹುದಾಗಿದೆ. ಶ್ರೀನಗರ ರೈಲ್ವೆ ನಿಲ್ದಾಣದಿಂದ 90 ಕಿ.ಮೀ ದೂರದಲ್ಲಿ ಬೇತಾಬ್ ಕಣಿವೆ ಇದೆ. ಇನ್ನು ಮಧ್ಯ ಪ್ರದೇಶ ರಾಜ್ಯದ ಅನುಪ್ಪುರ ಜಿಲ್ಲೆಯ ತೀರ್ಥಸ್ಥಳವಾದ ಅಮರಕಂಟಕ ಎಂಬ ಬೆಟ್ಟವೊಂದರಲ್ಲಿರುವ ನರ್ಮದಾ ಕುಂಡದಿಂದ ಉಗಮಗೊಳ್ಳುವ ನರ್ಮದಾ ನದಿಯು ಮಧ್ಯಪ್ರದೇಶ ರಾಜ್ಯದ ಜೀವ ನದಿಯಾಗಿದೆ.
ಈ ನರ್ಮದಾ ನದಿ ಕಣಿವೆಯು ಸುಂದರವಾಗಿದೆ. ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿರುವ ಬೇಡಾ ಘಾಟ್‌ನ ನರ್ಮದಾ ನದಿಯ ಕಣಿವೆ ಪ್ರದೇಶದಲ್ಲಿ ಧುವಾಧರ್ ಜಲಪಾತವಿದೆ. ಉತ್ತರಾಖಂಡದ ಗಂಗೋತ್ರಿ ಬಳಿಯಿರುವ ಭಾಗೀರತಿ ಕಣಿವೆಯು ಆಕರ್ಷಕ ಬೆಟ್ಟ ಪರ್ವತಗಳ ಮಧ್ಯದಲ್ಲಿ ಹರಿದಿರುವ ಭಾಗೀರಥಿ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಹಿಂದೂ ಧರ್ಮದಲ್ಲಿ ಭಾಗಿರಥಿ ನದಿಯನ್ನು ಗಂಗೆಯ ಮೂಲ ಎಂದು ತಿಳಿಯಲಾಗಿದೆ. ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿರುವ ಕುಲ್ಲು ಕಣಿವೆಯು ಒಂದು ರೋಮಾಂಚಕ ಪ್ರವಾಸಿ ಆಕರ್ಷಣೆಯಾಗಿದೆ. ಬಯಾಸ್ ನದಿಯು ಸೊಗಸಾಗಿ ಹರಿಯುವ ಈ ಕಣಿವೆಯಲ್ಲಿ ರಾಫ್ಟಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ನಡೆಯುತ್ತಿರುತ್ತವೆ.
✍ ಲಲಿತಶ್ರೀ ಪ್ರೀತಂ ರೈ