ಪ್ರಕೃತಿ ಸೊಬಗು-ಬಿನ್ನಾನವನ್ನು ವರ್ಣಿಸುವುದು ಅಸಾದ್ಯ. ಅದೆಷ್ಟು ವರ್ಣಿಸಿದರೂ ತೃಪ್ತಿಯಾಗದ ಭಾವ ಪ್ರತಿಯೊಬ್ಬನ ಮನದಲ್ಲೂ ಮೂಡುವುದರಲ್ಲಿ ಸಂದೇಹವಿಲ್ಲ. ಅಂತಹ ಪ್ರಕೃತಿಯಲ್ಲಿ ಬೇರತಂತಹ ಎದೆಷ್ಟೋ ಚಿಕ್ಕ ಪುಟ್ಟ ನೀರಿನ ಜರಿಯಿಂದ ಹಿಡಿದು ಬಹು ದೊಡ್ಡದಾದ ಜಲಪಾತಗಳು ನಮ್ಮ ಕಣ್ಣಮುಂದೆ ಸಿಗುತ್ತವೆ. ಅಂತಹ ಜಲಪಾತಗಳಲ್ಲಿ ವಿಶ್ವವಿಖ್ಯಾತವಾದ, ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದಾದ “ಗೇರುಸೊಪ್ಪಿನ ಜಲಪಾತ ಅಥವಾ ಜೋಗ ಜಲಪಾತ” ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಟ್ಟವಾದ ಕಾಡುಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆಯಾದರೂ ಜಲಪಾತವನ್ನು ವೀಕ್ಷಿಸುವತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.ಇದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ಕೇವಲ 16 ಕಿಮೀ ದೂರದಲ್ಲಿದೆ.
ಇದು ಒಂದು ಪ್ರಮುಖ ಪ್ರವಾಸಿ ತಾಣವೂ ಹೌದು. ಜೋಗ ಜಲಪಾತವು ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯಂತ ರಮಣೀಯ ರೂಪ ತಾಳುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು.ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ 2400 ಅಡಿ, ಎವಾನ್ಸನ್ 1200 ಅಡಿ ಮತ್ತು ಆರ್ವೆ 1100 ಅಡಿ ಇದ್ದು ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ 194 ಅಡಿ ಮಾತ್ರ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ 250 ಗಜಗಳಷ್ಟು ಉದ್ದವಾಗಿದೆ.
ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದಾಗಿದೆ. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ.
ಸೂರ್ಯಕಿರಣಗಳಿಂದ ಜಲಪಾತದ ಸುತ್ತಾ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನ ಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘ ನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುದೆಂದು ಸ್ಥಳಿಯರು ಹೇಳುತ್ತಾರೆ. ಗೇರುಸೊಪ್ಪೆ ಜಲಪಾತದ ಮಾಹಿತಿಗಳನ್ನು ಸಂಗ್ರಹಿಸಲು ಮಾರ್ಚ್ 1856ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ ಪ್ರಪಾತದ ಆಳ 829 ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ 159 ಅಡಿಗಳು. 1869ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತಂತೆ. ಈಗ ಜಲಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ.
ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹ ಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. 1930ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ 1939ರಲ್ಲಿ ಜೋಗ ಜಲಪಾತದಿಂದ 24 ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ 21 1949ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ 120 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು. 90ರ ದಶಕದಲ್ಲಿ ಲಿಂಗನಮಕ್ಕಿಜಲಾಶಯ ಪ್ರಾರಂಭವಾದ ನಂತರ ಈ ಯೋಜನೆಗೆ ನೀರಿನ ಮೂಲ ಕಡಿಮೆಯಾಯಿತು.
✍ಲಲಿತಶ್ರೀ ಪ್ರೀತಂ ರೈ