image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುಷ್ಪ ಕಣಿವೆ The Valley of Flowers

ಪುಷ್ಪ ಕಣಿವೆ The Valley of Flowers

ಪೃಕೃತಿಯ ಚಂದವನ್ನು ಬಣ್ಣಿಸಲು ಅಸಾಧ್ಯ. ಯಾಕೆಂದರೆ ಈ ಪೃಕೃತಿಯಲ್ಲಿ ಅಡಗಿರುವ ಸೌಂದರ್ಯದ ಸೆಳೆತವೇ ಅಸಮಾನ್ಯವಾದುದು. ಅದನ್ನು ಬಣ್ಣಿಸುತ್ತಾ ಹೋದರೆ ಪದಗಳಿಗೆ ನಿಲುಕದೇ ಹೋಗಬಹುದು.

ಭಾರತದ ಉತ್ತರಾಖಂಡ ರಾಜ್ಯದಲ್ಲಿ ಪಶ್ಚಿಮ ಹಿಮಾಲಯದ ಉನ್ನತ ಪ್ರದೇಶದಲಿರುವ ಸಮುದ್ರ ಮಟ್ಟದಿಂದ 3352 ರಿಂದ 3658 ಮೀಟರ್ ಎತ್ತರದಲ್ಲಿರುವ ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು, ನೂರಾರು ಬಗೆಯ ಅಸಾಮಾನ್ಯ ಹೂವುಗಳ ನೈಸರ್ಗಿಕ ತೋಟವಾಗಿದೆ. ಅಷ್ಟೇ ಅಲ್ಲದೆ ಜೀವ ವೈವಿಧ್ಯದ ನೆಲೆಯಾಗಿರುವ ರಾಷ್ಟ್ರೀಯ ಉದ್ಯಾನವು ಟಾಹ್ರ್, ಹಿಮ ಚಿರತೆ, ಕಸ್ತೂರಿ ಮೃಗ, ಕೆಂಪು ನರಿ, ಕೋತಿ, ಭರಲ್, ಹಿಮಾಲಯದ ಕಪ್ಪು ಕರಡಿ ಮತ್ತು ಕೆಂಪು ಕರಡಿ, ಪಿಕಾಲ್ ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ.

ಅಗಾಧ ಸಂಖ್ಯೆಯ ಚಿಟ್ಟೆಗಳ ಪ್ರಬೇಧಗಳು ಇಲ್ಲಿ ಕಾಣ ಸಿಗುತ್ತದೆ. ಅಲ್ಲದೆ ಹಿಮಾಲಯದ ಗರುಡ, ಗ್ರಿಫಾನ್ ಹದ್ದು, ಹಿಮ ಕೋಳಿ, ಮೊನಾಲ್, ಹಿಮ ಪಾರಿವಾಳ ಮುಂತಾದ ಹಲವಾರು ಪಕ್ಷಿ ಸಮೂಹವೇ ಇಲ್ಲಿ ನೆಲೆಸಿದೆ. ಇಲ್ಲಿನ ಹೂವುಗಳು  ಆಲ್ಪೈನ್ ತಳಿಗೆ ಸೇರಿದ್ದು ಮುಖ್ಯವಾಗಿ ಆರ್ಖಿಡ್, ಪ್ರೈಮ್ಯೂಲಾ, ಮೇರಿಗೋಲ್ಡ್, ಡೈಸೀಗಳು ಹೆಚ್ಚಾಗಿವೆ.

ಇಲ್ಲಿನ ಪ್ರದೇಶವು ಆಲ್ಪೈನ್ ಬಿರ್ಚ್ ಮತ್ತು ರೋಡೋಡೆಂಡ್ರಾನ್ ಮರಗಳನ್ನು ಹೆಚ್ಚಾಗಿ ಹೊಂದಿರುವ ಕಾಡಿನಿಂದ ಆವೃತವಾಗಿದೆ. ಇದು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳು ಮತ್ತು ವಿವಿಧ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದ್ದು, ಕಪ್ಪು ಕರಡಿ, ಹಿಮ ಚಿರತೆ, ಕಸ್ತೂರಿ ಜಿಂಕೆ, ಕಂದು ಕರಡಿ, ಕೆಂಪು ನರಿ ಮತ್ತು ನೀಲಿ ಕುರಿಗಳು ಸೇರಿದಂತೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಈ ಸಮೃದ್ಧ ವೈವಿಧ್ಯಮಯ ಪ್ರದೇಶವಿದೆ. ಉದ್ಯಾನದಲ್ಲಿ ಕಂಡು ಬರುವ ಪಕ್ಷಿಗಳಲ್ಲಿ ಹಿಮಾಲಯನ್ ಮೋನಾಲ್ ಫೆಸೆಂಟ್ ಮತ್ತು ಇತರ ಎತ್ತರದ ಪಕ್ಷಿಗಳು ಸೇರಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಗುರುತಿಸಲ್ಪಡುವ ಈ ಉದ್ಯಾನ ಉನ್ನತ ಪರ್ವತ ಪ್ರಾಂತ್ಯವಾಗಿದ್ದರೂ ಸಹ ತೀವ್ರ ಕಡಿದಾಗಿಲ್ಲ.

ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣವು ಸುಮಾರು 87.50 ಚದರ ಕಿ.ಮೀ. ಗಳಷ್ಟು ಈ ಎರಡೂ ಉದ್ಯಾನಗಳು ಒಟ್ಟಾಗಿ ವಿಶ್ವ ಪರಂಪರೆಯ ತಾಣವಾಗಿ ಮಾನ್ಯತೆ ಪಡೆದಿವೆ. ಇಲ್ಲಿ ಇರುವ ಔಷದೀಯ ಗಿಡಮೂಲಿಕೆಗಳ ಪ್ರಕಾರಗಳು ಹಿಮಾಲಯದ ಇತರ ಯಾವುದೇ ಪ್ರದೇಶಗಳಲ್ಲಿಗಿಂತ ಹೆಚ್ಚಾಗಿದೆ. ಕೆಲವು ಗಿಡ ಮೂಲಿಕೆಗಳಂತೂ ಪಕ್ಕದಲ್ಲಿಯೇ ಇರುವ ನಂದಾದೇವಿ ಉದ್ಯಾನವನದಲ್ಲಿಯೂ ಕಾಣ ಸಿಗುವುದಿಲ್ಲ ಎನ್ನುವುದೇ ಅಚ್ಚರಿಯ ವಿಷಯ. 1931ರ ವರೆಗೂ ಹೊರ ಜಗತ್ತಿನಿಂದ ಈ ಕಣಿವೆಯು ದೂರವಾಗಿತ್ತು ಎನ್ನಲಾಗುತ್ತದೆಯಾದರೂ ಹಿಂದೂ ಪುರಾಣಗಳಲ್ಲಿ ಇದರ ಉಲ್ಲೇಖವಿದೆ ಎನ್ನಲಾಗುತ್ತದೆ. ಹಾಗೂ ಋಷಿ ಮುನಿಗಳು ತಪಸ್ಸು ಮಾಡಲು ಈ ಪ್ರದೇಶಕ್ಕೆ ಹೋಗುತ್ತಿದ್ದರು ಎನ್ನುವುದರ ಬಗ್ಗೆ ಕೂಡ ಉಲ್ಲೇಖಗಳಿವೆ. ಇತಿಹಾಸದ ಪ್ರಕಾರ ಪರ್ವತಾ ರೋಹಿ ಫ್ರಾಂಕ್ ಸ್ಮಿತ್ ಎಂಬಾತ ಹಿಮಾಲಯ ಪರ್ವತವನ್ನು ಏರುವಾಗ ದಾರಿ ತಪ್ಪಿ ಈ ಕಣಿವೆಗೆ ಭೇಟಿ ನೀಡುತ್ತಾನೆ.

ಇಲ್ಲಿನ ಹೂವುಗಳ ಸೌಂದರ್ಯವನ್ನು ಕಂಡು ಬರೆಗಾದ ಆತ "ವ್ಯಾಲಿ ಆಫ್ ಫ್ಲವರ್ಸ್" ಎಂಬ ಪುಸ್ತಕವನ್ನು ಹೊರ ತರುತ್ತಾನೆ. ಆ ಬಳಿಕ ಇದು ಹೆಚ್ಚು ಪ್ರಸಿದ್ಧಿಗೆ ಬಂತು. ಉದ್ಯಾನವನ್ನು ೧೯೮೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಅಲ್ಲದೆ ಜಾನುವಾರುಗಳನ್ನು ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ.

ಜೂನ್‌ನಿಂದ ಅಕ್ಟೋಬರ್ ತಿಂಗಳವರೆಗೆ ತೆರೆದಿರುವ ಈ ಪ್ರದೇಶವು ಇತರ ಸಮಯದಲ್ಲಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿ ಹೋಗಿರುತ್ತದೆ. ಹಿಮಾಲಯದ ಝಂಸ್ಕಾರ್ ಶ್ರೇಣಿಯಲ್ಲಿರುವ ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನದ ಅತ್ಯುನ್ನತ ಸ್ಥಾನವೆಂದರೆ 6719 ಮೀ. ಎತ್ತರವಿರುವ ಗೌರಿ ಪರ್ಬತ್. ಈ ರಾಷ್ಟ್ರೀಯ ಉದ್ಯಾನವನ್ನು ತಲುಪಲು ಸುಮಾರು 17 ಕಿ.ಮೀ. ಗಳಷ್ಟು ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸ ಬೇಕಾಗುತ್ತದೆ. ಇಲ್ಲಿಗೆ ಸಮೀಪದ ದೊಡ್ಡ ಪಟ್ಟಣವೆಂದರೆ ಜೋಷಿಮಠ. ಜೋಷಿಮಠವು ಹರಿದ್ವಾರ ಮತ್ತು ಡೆಹ್ರಾಡೂನ್ ನಗರಗಳೋದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದ್ದು, ಜೋಷಿ ಮಠದಿಂದ ಬದರಿನಾಥಕ್ಕೆ ತೆರಳುವ ರಸ್ತೆಯ ಲ್ಲಿ ಗೋವಿಂದ್ ಘಾಟ್ ಎಂಬ ಹಳ್ಳಿಗೆ ಸಾಗಿ ಅಲ್ಲಿಂದ ಮುಂದೆ ಕಾಲುದಾರಿಯನ್ನು ಹಿಡಿದು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳಬೇಕಾಗುತ್ತದೆ.

 

Category
ಕರಾವಳಿ ತರಂಗಿಣಿ