image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುರಾಣ ಪ್ರಕಾರ ಪಾರ್ವತಿ ದೇವಿಯ ತಂದೆ ಹಿಮವತನಿಂದ ಆಳಲ್ಪಟ್ಟ ಸಾಮ್ರಾಜ್ಯವೇ ಹಿಮಾಲಯ..

ಪುರಾಣ ಪ್ರಕಾರ ಪಾರ್ವತಿ ದೇವಿಯ ತಂದೆ ಹಿಮವತನಿಂದ ಆಳಲ್ಪಟ್ಟ ಸಾಮ್ರಾಜ್ಯವೇ ಹಿಮಾಲಯ..

ಹಿಮಾಲಯವು ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತ ಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿಗಳ ತವರು ಕೂಡ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ. ಸುಮಾರು 4ರಿಂದ7 ಕೋಟಿ ವರ್ಷಗಳ ಹಿಂದೆ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು ಎನ್ನಲಾಗುತ್ತದೆ. ಸುಮಾರು ಎರಡು ಮೂರು ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ ಎನ್ನಲಾಗುತ್ತದೆ. ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆ. ಮೀನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನಂಗಾ ಪರ್ಬತ್" ಇಂದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದವರೆಗೆ ಸುಮಾರು 2400 ಕಿಮೀ ಉದ್ದವಿದೆ. ಅಗಲ 250-300 ಕಿಮೀ. ಹಿಮಾಲಯ ಟಿ ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು. ಹಿಮಾಲಯ ಪ್ರದೇಶದಲ್ಲಿ ನೂರಾರು ಸರೋವರಗಳು ಕಂಡುಬರುತ್ತವೆ. ಈ ಸರೋವರಗಳಲ್ಲಿ ಹೆಚ್ಚಿನವು 5000ಮೀ. ಗಿಂತ ಕಡಿಮೆ ಎತ್ತರದಲ್ಲಿ ಸಿಗುತ್ತವೆ. ಹಾಗೂ ಈ ಸರೋವರಗಳ ವಿಸ್ತಾರವು  ಕಡಿಮೆಯಾಗುತ್ತದೆ. ಇವುಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ ಬಳಿಯಿರುವ ಈ ಸರೋವರವು ಸುಮಾರು 8 ಕಿ.ಮೀ. ಅಗಲ ಹಾಗೂ 134 ಕಿ.ಮೀ. ಉದ್ದವಿದ್ದು, 4600 ಮೀ. ಎತ್ತರದಲ್ಲಿದೆ. ಇನ್ನೂ ಎತ್ತರದಲ್ಲಿರುವ ಒಂದು ಮುಖ್ಯವಾದ ಸರೋವರ ಗುರುಡೋಗ್ಮಾರ್. ಉತ್ತರ ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್ 5148 ಮೀ. (16,890 ಅಡಿ) ಎತ್ತರದಲ್ಲಿದೆ. ಇನ್ನಿತರ ದೊಡ್ಡ ಸರೋವರಗಳಲ್ಲಿ ಭಾರತ/ ಚೀನಾ ಸರಹದ್ದಿನ ಬಳಿ ಸಿಕ್ಕಿಂನಲ್ಲಿರುವ ಛಾಂಗು ಸರೋವರವೂ ಸೇರಿದೆ. ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಭೂವಿಜ್ಞಾನಿಗಳು ಟಾರ್ನ್ ಗಳೆಂದು ಕರೆಯುತ್ತಾರೆ. ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ ಎಂದರೆ ಪಾರ್ವತಿಯ ತಂದೆಯ ಸಾಮ್ರಾಜ್ಯ ಎನ್ನಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅವುಗಳಲ್ಲಿ ಹರಿದ್ವಾರದಲ್ಲಿ ಗಂಗಾ ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತಾಳೆ. ಬದರೀನಾಥ್‌ನಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ. ಕೇದಾರನಾಥ್‌ದಲ್ಲಿ ಜ್ಯೋತಿರ್ಲಿಂಗವನ್ನು ಕಾಣಬಹುದು. ಗೋಮುಖ್ ಭಾಗೀರಥಿಯ ಉಗಮ ಸ್ಥಳ. ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ. ದೇವಪ್ರಯಾಗದಲ್ಲಿ ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ. ಕೈಲಾಸ ಪರ್ವತವು 6,638 ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ. ಅಮರನಾಥದಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಸಮಯದಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ. ವೈಷ್ಣವೋ ದೇವಿ ಮಂದಿರವು ಪ್ರಸಿದ್ಧಿಯನ್ನು ಹೊಂದಿದೆ. ದಲೈಲಾಮಾ ಅವರ ನಿವಾಸ ಸೇರಿದಂತೆ ಟಿಬೆಟ್ಟಿನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ. ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ- ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ,ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟು ಮಾಡುತ್ತದೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ