ಭಾರತ ಪುಣ್ಯ ಭೂಮಿ. ಈ ನೆಲದಲ್ಲಿ ಹುಟ್ಟಿರುವ ಪ್ರತಿ ಜೀವಿಯೂ ಈ ನೆಲದ ಬಗ್ಗೆ ಹೆಮ್ಮೆ ಪಡಬೇಕು, ಮಹಾನ್ ಋಷಿ ಪುಂಗವರು ಜನಿಸಿದ ನೆಲೆಬೀಡು ನಮ್ಮ ಈ ಭೂಮಿ. ನಮ್ಮ ಹಿರಿಯರು ಗಿಡ ಮರ, ನೆಲ ಜಲ, ಪ್ರಾಣಿ ಪಕ್ಷಿ ಎಲ್ಲದರಲ್ಲೂ ದೇವರನ್ನು ಕಂಡಿದ್ದಾರೆ ದೇವರು ಬೇರೆಲ್ಲೂ ಇಲ್ಲ ನಮ್ಮ ಪೃಕೃತಿಯಲ್ಲೆ ಬೆರೆತಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಪೃಕೃತಿಯು ದೇವರು ನಮಗಾಗಿ ಕರುಣಿಸಿದ ಅಪೂರ್ವವಾದ ಕೊಡುಗೆ. ಹಾಗೆಯೆ ಈ ಭೂಮಿಯಲ್ಲಿ ಹೆಣ್ಣಿಗೂ ಪೂಜ್ಯನೀಯ ಸ್ಥಾನ ಎನ್ನುವುದಕ್ಕೆ ಭಾರತವನ್ನು ಭಾರತಾಂಬೆಯಾಗಿ ಪೂಜಿಸಿರುವುದೇ ಸಾಕ್ಷಿ. ಒಂದು ಮನೆಯಲ್ಲಿ ಹಣ್ಣಿಗೆ ಎಷ್ಟು ಮಹತ್ವ ಇದೆಯೋ ಹಾಗೆ ನಮ್ಮ ಭೂಮಿಯಲ್ಲಿ ನದಿಗಳಿಗೂ ಅಷ್ಟೇ ಮಹತ್ವ ಮತ್ತು ಪೂಜ್ಯನೀಯ ಭಾವ. ಅದಕ್ಕೆ ನದಿಗಳಿಗೆ ಹೆಣ್ಣಿನ ಹೆಸರನ್ನು ಇಟ್ಟಿರಬಹುದು ಎನ್ನುವುದು ನನ್ನ ಅನಿಸಿಕೆ. ನದಿಗಳು ಎಲ್ಲೋ ಹುಟ್ಟಿ ಎಲ್ಲೋ ಸಾಗಿ ಸಾಗರವನ್ನು ಸೇರುತ್ತವೆ. ಹಾಗೇ ಹೆಣ್ಣು ತನ್ನ ತವರಿನಲ್ಲಿ ಹುಟ್ಟಿ, ಆ ಮನೆಯಲ್ಲಿ ಮಹಾರಾಣಿಯಾಗಿ ಬೆಳೆದು, ಮುಂದೆ ಯೌವನದಲ್ಲಿ ತಾನು ಹುಟ್ಟಿ ಬೆಳೆದ ಮನೆಯಿಂದ ದೂರಾಗಿ ಗಂಡನ ಮನೆಯನ್ನು ಬೆಳಗಲು ಹೊರಡುತ್ತಾಳೆ. ಅಂತಹ ಸಂದರ್ಭದಲ್ಲಿ ಅವಳ ನೋವು, ದುಃಖ, ದುಮ್ಮಾನಗಳನ್ನು ತನ್ನೊಳಗೆ ಬಚ್ಚಿಟ್ಟು ತನ್ನ ತವರಿನ ಮತ್ತು ಗಂಡನ ಮನೆಯ ಶ್ರೇಯಸ್ಸಿಗಾಗಿ ಪಾರ್ಥಿಸುತ್ತಾಳೆ.
ಹಾಗೆ ನದಿಗಳ ವಿಚಾರಕ್ಕೆ ಬರುವುದಾದರೆ ಎಲ್ಲೋ ಹುಟ್ಟಿ, ಕಾಡು ಮೇಡು, ಬೆಟ್ಟ ಗುಡ್ಡ ಸುತ್ತಿ ಸಾಗರವನ್ನು ಸೇರಲು ತವಕಿಸುತ್ತಾ ಮುಂದೆ ಸಾಗುತ್ತಾಳೆ. ಹಾಗೆ ಸಾಗುತ್ತಾ ತಾನು ಹುಟ್ಟಿದ ಮನೆಯಿಂದ ದೂರಾವಾದ ನೋವನ್ನು ಬಚ್ಚಿಟ್ಟುಕೊಂಡು, ಎಲ್ಲೋ ಒಂದು ದಿನ ಆ ನೋವು ಭಾವಪೂರವಾಗಿ ಹರಿದು ಕೆಲವು ಸಲ ಜನರ ಜೀವನಕ್ಕೂ ತೊಂದರೆ ಉಂಟುಮಾಡಿ, ಮತ್ತೆ ಭೂಮಿಗೆ ಹಸಿರುಣಿಸಿ ತನ್ನ ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿರುವಂತೆ ನನಗನಿಸುವುದು ಇದೆ. ಇಂತಹ ನದಿಗಳ ಅಂದ ಚೆಂದವನ್ನು ನಮ್ಮ ಕವಿ ಪುಂಗವರು ಹಾಡಿ ಹೊಗಳಿದ್ದಾರೆ.
ನಮ್ಮ ಋಷಿವರ್ಯರು ನದಿಗಳ ಪ್ರಾಮುಖ್ಯತೆಯನ್ನು ತಿಳಿಸಿ, ಅವುಗಳ ಪಾವಿತ್ರ್ಯತೆಯನ್ನು ಜಗತ್ತಿಗೆ ಸಾರಿದ್ದಾರೆ. ನದಿಗಳು ಮೈಮನಗಳ ಕೊಳೆ ತೊಳೆಯುವ ಸಾಧನ ಎಂಬುದು ಕೂಡ ನಮ್ಮ ನಂಬಿಕೆ. ನದಿಗಳು ಹೇಗೆ ಎಲ್ಲೋ ಪರ್ವತಗಳ ತಪ್ಪಲಿನಲ್ಲಿ ಹುಟ್ಟಿ ಎಲ್ಲಾ ಅಡಚಣೆಗಳನ್ನು ಸರಿಸಿ ಮುಂದುವರಿಯುತ್ತದೆಯೋ ಹಾಗೆ ನಮ್ಮ ಜೀವನದಲ್ಲಿ ನಾವೂ ಕೂಡ ಬರುವ ಅಡಚಣೆಗಳನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಸಾಗಬೇಕು ಎನ್ನುವುದನ್ನು ಇಲ್ಲಿ ಅರಿಯಬೇಕು.ಇನ್ನು ಭಾರತದಲ್ಲಿ ಸುಮಾರು 1000ಕ್ಕೂ ಹೆಚ್ಚು ನದಿಗಳು, 500ಕ್ಕೂ ಹೆಚ್ಚು ಪ್ರಮುಖ ನದಿಗಳು ಹರಿಯುತ್ತಿವೆ. ಅದರಲ್ಲಿ 12ಕ್ಕೂ ಹೆಚ್ಚು ಮಹಾನದಿಗಳು, ಗಂಗಾ, ಯಮುನ, ಬ್ರಹ್ಮಪುತ್ರ, ನರ್ಮದಾ, ಚಂಬಲ್, ಕಾವೇರಿ, ತಾಪ್ತಿ, ಬೀಸ್, ಗೋದಾವರಿ, ಚೇನಾಬ್, ಕೃಷ್ಣ, ಸರಸ್ವತಿ, ಸಿಂದೂ ಇತ್ಯಾದಿ.
ಈ ಮಹಾನದಿಗಳಿಗೆ ಅಲ್ಲಲ್ಲಿ ಉಪನದಿಗಳು ಸೇರಿಕೊಂಡು, ಕೆಲವು ಅರಬ್ಬಿ ಸಮುದ್ರವನ್ನು ಸೇರಿದರೆ ಇನ್ನು ಕೆಲವು ಬಂಗಾಳಕೊಳ್ಳಿ ಹಾಗೆ ಹಿಂದೂ ಮಹಾಸಾಗರವನ್ನು ಸೇರಿಕೊಳ್ಳುತ್ತವೆ. ಈ ಎಲ್ಲಾ ನದಿಗಳಲ್ಲಿ ಗಂಗೆಗೆ ಪ್ರಥಮ ಸ್ಥಾನ. ಗಂಗೆ ಮುಕ್ತಿ ಮೋಕ್ಷಗಳ ಸಂಕೇತ ಮತ್ತು ಭಕ್ತಿಯ ಪ್ರತೀಕ. ಆಕೆ ದೇಶದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಸಾಮಾಜಿಕ ಬದುಕಿನ ಕೇಂದ್ರವೂ ಹೌದು. ಜೀವನದಲ್ಲಿ ಒಮ್ಮೆಯಾದರೂ ಗಂಗೆಯಲ್ಲಿ ಮಿಂದೆದ್ದು, ತೀರ್ಥ ಸೇವಿಸಬೇಕೆಂಬುದು ಕೆಲವರ ಹಂಬಲ. ಹಾಗೆ ಗಂಗಾ ಜಲವನ್ನು ಅಮೃತ ಎಂದು ಭಾವಿಸಿರುವ ದೇಶ ನಮ್ಮದು. ನಮ್ಮ ಪ್ರಾಚೀನ ಸಾಹಿತ್ಯದಲ್ಲೂ ಗಂಗೆಯನ್ನು ವರ್ಣಿಸಿದ್ದಾರೆ. ವಾಗ್ಭಟನ ಅಷ್ಠಾಂಗ ಹೃದಯದಲ್ಲೂ ಗಂಗಾ ಜಲವನ್ನು ಆರೋಗ್ಯಕರ, ಪವಿತ್ರ, ಆಹ್ಲಾದಕರ ಎಂದು ಸಾರಿ ಸಾರಿ ಹೇಳಿದ್ದಾರೆ. ಗಂಗೆಯು ಸುರಲೊಕದಲ್ಲಿ ಅಲಕಾನಂದ, ಪಿತೃ ಲೋಕದಲ್ಲಿ ವೃತರಣಿ, ಭೂಮಿಯಲ್ಲಿ ಗಂಗೆ ಹೀಗೆ ಮೂರೂ ಲೊಕದಲ್ಲಿ ಹರಿದಿದ್ದಾಳೆ ಎಂಬ ನಂಬಿಕೆ ಇದೆ. ಭಗೀರಥನ ತಪಸ್ಸಿನ ಫಲವಾಗಿ ಭಾಗೀರಥಿಯಾಗಿ ಗಂಗೆ ಭೂಮಿಗೆ ಬಂದಳು ಎನ್ನುವುದನ್ನು ಪುರಾಣಗಳಲ್ಲಿ ಓದಬಹುದು. ಗಂಗೆಯು ಸಮುದ್ರ ಮಟ್ಟದಿಂದ ಸುಮಾರು 13800 ಅಡಿಗಳಷ್ಟು ಎತ್ತರದ ಗಂಗೋತ್ರಿಯ ಹತ್ತಿರ ಗೋಮುಖದಿಂದ ಇಳಿಯುತ್ತಾಳೆ. ಗೋಮುಖದಿಂದ ಹೊರಟ ಗಂಗೆಗೆ ಹಲವು ಹೆಸರು ಇದೆ. ಭಗೀರಥನ ತಪಸ್ಸಿನ ಫಲವಾಗಿ ಭಾಗೀರಥಿ, ಜುಹ್ನುವಿನ ಕಿವಿಯಿಂದ ಹೊರಬಂದು ಜಾಹ್ನವಿ, ಮುಂದೆ ಬದರಿಯಲ್ಲಿ ಅಲಕಾನಂದೆ, ಕೇದಾರದಲ್ಲಿ ಮಂದಾಕಿಣಿಯಾಗಿದ್ದಾಳೆ. ಮುಂದೆ ರಾಮಗಂಗಾ, ಮಹಾಗಂಗಾ, ಕೃಷ್ಣಗಂಗಾ, ವಿಷ್ಣುಗಂಗಾ, ಕಾಳಿಗಂಗಾ ಮುಂತಾದ ಕವಲುಗಳು ಒಂದುಗೂಡುತ್ತವೆ. ಗಂಗೆ ಹರಿದ್ವಾರದಲ್ಲಿ ಮೈದುಂಬಿ ಹರಿಯುತ್ತಾಳೆ. ಹಾಗಾಗಿ ಹರಿದ್ವಾರವನ್ನು ಗಂಗಾದ್ವಾರ ಎಂದು ಕರೆಯುತ್ತಾರೆ. ಮುಂದೆ ಪ್ರಯಾಗದಲ್ಲಿ ಗಂಗೆ ಮತ್ತು ಯಮುನೆಯರೊಂದಿಗೆ ಗುಪ್ತಗಾಮಿನಿ ಸರಸ್ವತಿ ಸೇರಿಕೊಳ್ಳುವುದರಿಂದ ಈ ಸ್ಥಳವು ತೀರ್ಥರಾಜ ಎಂದು ಪಸಿದ್ಧವಾಗಿದೆ. ಪ್ರಯಾಗದಿಂದ ಈಕೆ ಪೂರ್ವ ದಿಕ್ಕಿಗೆ ಹರಿಯುತ್ತಾಳೆ. ಮುಂದೆ ಹಲವು ಪುಣ್ಯಕ್ಷೇತ್ರಗಳು ಗಂಗೆಯ ತಟದಲ್ಲಿದೆ. ಅವುಗಳಲ್ಲಿ ಪ್ರಮುಖವಾದುದು ಕಾಶಿ. ಕಾಶಿಯನ್ನು ವಾರಣಾಸಿ, ಬನಾರಸ್ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ವಿಮುಕ್ತಿ ಕ್ಷೇತ್ರವೆಂದು ಪ್ರಸಿದ್ಧವಾದ ವಾರಣಾಸಿಯು ಪ್ರಾಚೀನ ಕಾಲದಿಂದಲೂ ಜ್ಙಾನಕೇಂದ್ರವಾಗಿ ಮೆರೆದ ಸ್ಥಳ. ಇಲ್ಲಿ ಬನಾರಸ್ ಹಿಂದೂ ಯೂನಿರ್ವಸಿಟಿ ಇದೆ. ಗಂಗಾ ತಟದಲ್ಲಿ ಹಲವು ಘಾಟ್‌ಗಳಿದ್ದು ಅಲ್ಲಿ ಶವ ಸಂಸ್ಕಾರ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ವಿಷ್ಣುವಿನ ಪಾದದ ಚಿಹ್ನೆ ಹೊಂದಿರುವ ಗಯಾ ಗಂಗಾ ತಟದಲ್ಲಿರುವ ಇನ್ನೊಂದು ಪವಿತ್ರ ಕ್ಷೇತ್ರ, ಸಿದ್ಧಾರ್ಥ ಬುದ್ಧನಾಗಿದ್ದು ಇಲ್ಲಿಯೆ. ಬಿಹಾರದಲ್ಲೂ ಈಕೆಯ ತೀರದಲ್ಲಿ ಪ್ರಸಿದ್ಧ ನಗರಗಳಿವೆ. ಪಾಟಲೀಪುತ್ರ(ಪಾಟ್ನ) ಮತ್ತು ಭಾಗಲ್ಪುರ ಪ್ರಮುಖ ನಗರಗಳು. ಪ್ರಯಾಗದಿಂದ ಮುಂದೆ ಸಾಗುತ್ತಾ ರೋಣ, ಫಲ್ಗುಣಿ, ಗೋಮತಿ, ತವಸ, ಸರಯು ಮುಂತಾದ ನದಿಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಮುಂದೆ ಸಾಗುತ್ತಾಳೆ. ಪಶ್ಚಿಮ ಬಂಗಾಳದಲ್ಲೂ ಸಾಕಷ್ಟು ನಗರಗಳು ಗಂಗೆಯ ದಡದಲ್ಲಿವೆ. ಗಂಗೆಯ ಶಾಖೆಯೆ ಆದ ಹೂಗ್ಲಿ ಕಲ್ಕತ್ತದ ನಡುವೆ ಹರಿದಿದೆ. ಇದು ಒಂದು ಐತಿಹಾಸಿಕ ಸಾರಿಗೆ ಕೇಂದ್ರ. ರಾಮಕೃಷ್ಣ ಪರಮಹಂಸರ ಸಾಧನಾ ಕೇಂದ್ರ ದಕ್ಷಿಣೇಶ್ವರದಲ್ಲೂ ಗಂಗೆ ಹರಿದಿದ್ದಾಳೆ. ಬಂಗಾಳದಿಂದ ಆಗ್ನೇಯಕ್ಕೆ ತಿರುಗುವ ಗಂಗೆ ಬ್ರಹ್ಮಪುತ್ರವನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತಾಳೆ. ಹಿಮಾಲಯದಲ್ಲಿ ಹುಟ್ಟಿ ಸುಮಾರು 25000 ಕ್ಕೂ ಹೆಚ್ಚು ಕಿಲೋಮೀಟರು ದೂರ ಕ್ರಮಿಸಿ ಬಂಗಾಳಕೊಲ್ಲಿಯಲ್ಲಿ ವಿಲೀನಗೋಳ್ಳುತ್ತಾಳೆ. ಹೀಗೆ ಗಂಗೆ ಹರಿಯುವ ದಾರಿಯೆಲ್ಲ ಚೈತನ್ಯಮಯ ಹಾಗೂ ಪವಿತ್ರವಾಗಿಸಿದ್ದಾಳೆ.
✍ಲಲಿತಶ್ರೀ ಪ್ರೀತಂ ರೈ