image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗೆಳೆತನದ ಅಮರಗಾಥೆ: ಕಾರ್ಗಿಲ್ ಕದನದ ವೀರ ಸೇನಾನಿಗಳು

ಗೆಳೆತನದ ಅಮರಗಾಥೆ: ಕಾರ್ಗಿಲ್ ಕದನದ ವೀರ ಸೇನಾನಿಗಳು

ಭಾರತೀಯ ಸೈನ್ಯದ ಇತಿಹಾಸವು ಕೇವಲ ಯುದ್ಧಗಳ ಕಥೆಯಲ್ಲ, ಅದು ಶೌರ್ಯ ಮತ್ತು ಬದ್ಧತೆಯ ಅದ್ಭುತ ಸಂಗಮ. ಇಂತಹ ಅಪ್ರತಿಮ ಸಾಹಸಕ್ಕೆ ಸಾಕ್ಷಿಯಾದವರು 'ಬಜರಂಗ್ ಪೋಸ್ಟ್'ನ ವೀರರಾದ ಕ್ಯಾಪ್ಟನ್ ಅಮಿತ್ ಭಾರದ್ವಾಜ್ ಮತ್ತು ಅವರ ಒಡನಾಡಿ ರಾಜ್ವೀರ್ ಸಿಂಗ್. ಮಾರ್ಚ್ 4, 1972 ರಂದು ರಾಜಸ್ಥಾನದ ಜೈಪುರದಲ್ಲಿ ಶ್ರೀ ಒ.ಪಿ. ಶರ್ಮಾ ಮತ್ತು ಶ್ರೀಮತಿ ಸುಶೀಲಾ ಶರ್ಮಾ ಅವರ ಪುತ್ರನಾಗಿ ಜನಿಸಿದ ಅಮಿತ್ ಭಾರದ್ವಾಜ್, ಬಾಲ್ಯದಿಂದಲೇ ಚುರುಕುಬುದ್ಧಿಯ ಕ್ರೀಡಾಪಟುವಾಗಿದ್ದರು. ಜೈಪುರದ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಶಿಕ್ಷಣ ಮುಗಿಸಿ, ಟೇಬಲ್ ಟೆನಿಸ್ ಮತ್ತು ಫುಟ್ಬಾಲ್‌ನಲ್ಲಿ ಮಿಂಚುತ್ತಿದ್ದ ಇವರು, 1997 ರಲ್ಲಿ ದೇಶಸೇವೆಯ ಸಂಕಲ್ಪದೊಂದಿಗೆ ಸೈನ್ಯಕ್ಕೆ ಸೇರಿದರು. ಪ್ರಸಿದ್ಧ '4 ಜಾಟ್' ರೆಜಿಮೆಂಟ್‌ಗೆ ನಿಯೋಜನೆಗೊಂಡ ಅಮಿತ್, ಪಿಥೋರಗದಲ್ಲಿ ತಮ್ಮ ಮೊದಲ ಸೇವಾವಧಿಯನ್ನು ಯಶಸ್ವಿಯಾಗಿ ಪೂರೈಸಿ ನಂತರ ಕಾರ್ಗಿಲ್‌ನ ಅತ್ಯಂತ ಕಠಿಣವಾದ ಕಾಕ್ಸಾರ್ ಪ್ರದೇಶಕ್ಕೆ ನಿಯೋಜಿಸಲ್ಪಟ್ಟರು.

ಅದೇ ರೆಜಿಮೆಂಟ್‌ನಲ್ಲಿ ಅಮಿತ್ ಅವರಿಗೆ ಸಾಥ್ ನೀಡಿದವರು ಹರಿಯಾಣದ ಭವಾನಿ ಜಿಲ್ಲೆಯ ಮೌಡಿ ಗ್ರಾಮದ ಸಾಹಸಿ ಯುವಕ ರಾಜ್ವೀರ್ ಸಿಂಗ್. ಸಣ್ಣ ವಯಸ್ಸಿನಿಂದಲೇ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದ ರಾಜ್ವೀರ್ ಸಿಂಗ್ ಅವರ ಹಂಬಲವು ಅವರನ್ನು ಜಾಟ್ ರೆಜಿಮೆಂಟ್ ತಲುಪಿಸಿತ್ತು. ಪ್ರಸಿದ್ಧ ಜಾಟ್ ರೆಜಿಮೆಂಟ್‌ನಲ್ಲಿ ಇವರಿಬ್ಬರ ನಡುವೆ ಚಿಗುರಿದ ಗಾಢ ಗೆಳೆತನವು ಕೇವಲ ವೃತ್ತಿಜೀವನಕ್ಕೆ ಸೀಮಿತವಾಗಲಿಲ್ಲ. ಕಾರ್ಗಿಲ್ ಕದನದ ಸಮಯದಲ್ಲಿ ದೇಶದ ಗಡಿಯನ್ನು ಕಾಯುವ ಕಠಿಣ ಹಾದಿಯಲ್ಲಿ ಈ ಮಿತ್ರರಿಬ್ಬರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಬಜರಂಗ್ ಪೋಸ್ಟ್‌ನಲ್ಲಿ ಎದುರಾದ ಶತ್ರುಗಳ ಆಕ್ರಮಣವನ್ನು ಎದೆಗುಂದದೆ ಎದುರಿಸಿದ ಈ ವೀರರು, ಭಾರತದ ಮಣ್ಣಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸೈನ್ಯದಲ್ಲಿ ಆರಂಭವಾದ ಇವರ ಅಪೂರ್ವ ಸ್ನೇಹವು ಕಾರ್ಗಿಲ್‌ನ ರಣರಂಗದಲ್ಲಿ ವೀರಮರಣವನ್ನಪ್ಪುವ ಮೂಲಕ ಅಮರವಾಯಿತು. ಇಂದಿಗೂ ಇವರ ಬಲಿದಾನವು ಭಾರತೀಯ ಯುವಜನತೆಗೆ ದೇಶಪ್ರೇಮದ ಸ್ಫೂರ್ತಿಯ ಸೆಲೆಯಾಗಿದೆ. ಇವರನ್ನೂ ಕರಾವಳಿ ತರಂಗಿಣಿ ಹೆಮ್ಮೆಯಿಂದ ನೆನೆಸಿಕೊಳ್ಳುತ್ತಿದೆ.

✍ ಪ್ರೀತಂ ರೈ ಇಳಂತಾಜೆ

Category
ಕರಾವಳಿ ತರಂಗಿಣಿ