ಕಾರ್ಗಿಲ್ ಯುದ್ಧವನ್ನು ಯಾವ ಭಾರತೀಯನೂ ಮರೆಯಲಾರ. ಪಾಕಿಸ್ಥಾನದ ಕುತಂತ್ರದ ಫಲವೇ ಈ ಕಾರ್ಗಿಲ್ ಯುಧ್ಧ. ಕಾಪ್ಟನ್ ಸೌರಭ್ ಕಾಲಿಯಾ ಮತ್ತು ಅವರ ತಂಡದ ಕಾಣೆಯಿಂದ ಶುರುವಾಯಿತು ಕಾರ್ಗಿಲ್ ಸಮರ. ಕಾಪ್ಟನ್ ಸೌರಭ್ ಮತ್ತು ಸಂಗಡಿಗರನ್ನು ಹುಡುಕಲು ಹೊರಟ ತಂಡವನ್ನು ಮುನ್ನಡೆಸಿದವರು ಸೌರಭ್ ರ ಸೀನಿಯರ್ ಆಗಿದ್ದಂತ ಕಾಪ್ಟನ್ ಅಮಿತ್ ಭಾರದ್ವಾಜ್. ಅವರಿಗೆ ಗೆಳೆಯನಂತಿದ್ದ ಮತು ನೆರಳಿನಂತೆ ಹಿಂಬಾಲಿಸಿದವರು ಹವಾಲ್ದಾರ ರಾಜವೀರ್ ಸಿಂಗ್. ಮೇ ೧೫ ೧೯೯೯ ಕಾಪ್ಟನ್ ಸೌರಭ್ ಮತ್ತು ಸಂಗಡಿಗರು ಭಜರಂಗ್ ಪೊಸ್ಟ್ ಬಳಿಯಿಂದ ಕಾಣೆಯಾದರು. ಮೇ ೧೭ ರಂದು ಹುಡುಕಾಟ ಕಾರ್ಯಾಚರಣೆಗೆ ಕಾಪ್ಟನ್ ಅಮಿತ್ ಭಾರದ್ವಾಜ್, ಸಂಗಡಿಗ ಹವಾಲ್ದಾರ ರಾಜವೀರ್ ಸಿಂಗ್ ಮತ್ತು ತಂಡದಲ್ಲಿದ್ದ ೩೦ ಮಂದಿ ಹೊರಡುತ್ತಾರೆ. ಶತ್ರು ಸೈನ್ಯದ ಬಗ್ಗೆ ಕಾಪ್ಟನ್ ಸೌರಭ್ ಕಾಲಿಯಾ ತನಗೆ ಸಾಧ್ಯವಾದ ಕಿಂಚಿತ್ ಮಾಹಿತಿಯನ್ನು ಬೇಸ್‌ಗೆ ಕಳುಹಿಸಿದ್ದರು. ಆದೇ ಮಾಹಿತಿಯನ್ನು ಅವಲಂಬಿಸಿ ಕಾಪ್ಟನ್ ಅಮಿತ್ ಭಾರದ್ವಾಜ್ ಮತ್ತು ತಂಡ ಭಜರಂಗ್ ಪೋಸ್ಟ್ ಕಡೆ ಹೆಜ್ಜೆ ಹಾಕುತ್ತಾರೆ. ಶತ್ರುವಿನ ಸಂಖ್ಯೆ ಮತ್ತು ಬಲ ಎರಡನ್ನೂ ಸರಿಯಾಗಿ ತಿಳಿಯದೆ ಕಾಣೆಯಾದ ತಮ್ಮ ಸಂಗಡಿಗರನ್ನು ಹುಡುಕುತ್ತಾ ಮುನ್ನಡೆಯುತ್ತಾರೆ. ಆದರೆ ಅವರು ಹೆಜ್ಜೆ ಹಾಕುತ್ತಿರುವುದು ಮೃತ್ಯುಕೂಪಕ್ಕೆ ಎನ್ನುವುದು ಆಗ ತಿಳಿಯದು. ಜಾಟ್ ರೆಜಿಮೆಂಟ್‌ನ ಸೀನಿಯರ್ ಕಾಪ್ಟನ್ ಅಮಿತ್ ಭಾರದ್ವಾಜ್ ತನ್ನ ಅನುಭವವನ್ನು ಮೆಲುಕು ಹಾಕುತ್ತಾ ಮುಂದೆ ಬರಬಹುದಾದ ಅಪಾಯವನ್ನು ಗ್ರಹಿಸಿದ್ದರು. ಹೀಗೆ ತಮ್ಮ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸುತ್ತಾ ಭಜರಂಗ್ ಪೊಸ್ಟ್ ತಲುಪುವಾಗಲೇ ಶತ್ರುವಿನ ಸಂಖ್ಯೆ ಮತ್ತು ಬಲವನ್ನು ಗ್ರಹಿಸಿ ನಿಂತು ಬಿಡುತ್ತಾರೆ ಹಾಗೂ ಪರಿಸ್ಥಿತಿಯ ಗಂಭೀರತೆ ಅವರನ್ನು ಒಮ್ಮೆಗೆ ಚಿಂತಗೀಡು ಮಾಡುತ್ತದೆ. ಅವರ ತಂಡದ ರಕ್ಷಣೆಯ ಹೊಣೆ ಅವರದ್ದೇ ಆಗಿತ್ತು. ಮುಂದಡಿಯಿಟ್ಟರೆ ಬದುಕುವುದು ಅಸಾಧ್ಯ. ಅರೆ ನಿಮಿಷ ಯೋಚಿಸಿದವರೆ ಹಿಂದಡಿಯಿಟ್ಟು ಬೇಸ್‌ಗೆ ಸುದ್ದಿ ಮುಟ್ಟಿಸಬೇಕು ಅಂದುಕೊಳ್ಳುತ್ತಾರೆ. ಆದರೆ ಬೇಸ್‌ಗೆ ಹಿಂದಿರುಗಿದರೆ ಶತ್ರುವಿನ ಚಲನವನ್ನು ಅರಿಯುವುದು ಮತ್ತು ಶತ್ರುಗಳು ಮುಂದೆ ಬರದಂತೆ ತಡೆಯುವುದು ಹೇಗೆಂದು ಯೋಚಿಸಿದವರೆ, ತಮ್ಮ ತಂಡಕ್ಕೆ ಆಜ್ಙೆ ಮಾಡುತ್ತಾ ಹೇಳುತ್ತಾರೆ “ ನೀವೆಲ್ಲಾ ಬೇಸ್‌ಗೆ ಸುರಕ್ಷಿತವಾಗಿ ಹಿಂದಿರುಗಿ ಮತ್ತು ಇಲ್ಲಿನ ಪರಿಸ್ಥಿತಿ ತಿಳಿಸಿ, ಅಲ್ಲಿಯ ವರೆಗೆ ನಾನು ಇವರನ್ನು ಇಲ್ಲಿಯೇ ತಡೆಯುತ್ತೇನೆ.” ಇದನ್ನು ಕೇಳಿದ ತಂಡz ಸದಸ್ಯರು ಹಿಂದಡಿಯಿಡಲು ಒಪ್ಪದಿದ್ದರೂ ತಮ್ಮ ಕಮಾಂಡಿಗ್ ಆಫೀಸರ್ ಮಾತನ್ನು ಕೇಳಬೇಕಾಗುತ್ತದೆ. ತಂಡ ಬೇಸ್ ಕಡೆ ಹೊರಟರೂ ಹವಾಲ್ದಾರ ರಾಜವೀರ್ ಸಿಂಗ್ ಕಾಪ್ಟನ್ ಅಮಿತ್ ಭಾರದ್ವಾಜ್‌ರೊಂದಿಗೆ ಉಳಿಯುತ್ತಾರೆ. ಅಮಿತ್ ಎಷ್ಟೇ ಹೇಳಿದರೂ ಹವಾಲ್ದಾರ ರಾಜವೀರ್ ಸಿಂಗ್ ಅಮಿತ್‌ರನ್ನು ಬಿಟ್ಟು ಹೋಗಲು ಒಪ್ಪುವುದಿಲ್ಲ. ಸಿಟ್ಟಿಗೆದ್ದ ಅಮಿತ್ ಇದು ನಿನ್ನ ಕಮಾಂಡಿಗ್ ಆಫೀಸರ್‌ನ ಆರ್ಡರ್, ಮೀರಿದರೆ ಶಿಕ್ಷೆ ಅನುಭವಿಸಬೇಕು ಎಂದಾಗ ರಾಜವೀರ್ ಸಿಂಗ್ "ವಾಪಸ್ ಹೋದ ಮೇಲೆ ಶಿಕ್ಷಿಸಿ ಆದರೆ ಈಗ ನಿಮ್ಮನ್ನು ಬಿಟ್ಟು ಹೋಗಲಾರೆ" ಎಂದರು. ನೀನು ಎರಡು ಮಕ್ಕಳ ತಂದೆ ಹೊರಡು ಇಲ್ಲಿಂದ ಎಂದರೂ ರಾಜವೀರ್ ಸಿಂಗ್ ಮಕ್ಕಳನ್ನೊಮ್ಮೆ ನೆನೆಸಿ, ಮತ್ತೆ ಅಮಿತ್ ಜೊತೆ ಹೋರಾಡಲು ತಯಾರಾದರು. ಇಲ್ಲಿ ಇಬ್ಬರಿಗೂ ಸಾವಂತೂ ಖಚಿತ ಎಂದು ತಿಳಿದಿತ್ತು. ಆದರೂ ಕೊನೆ ಉಸಿರು ಇರೋವರೆಗೂ ಹೋರಾಟ ಮನದಿಚ್ಚೆಯಾಗಿತ್ತು. ಆಕ್ರಮಣ ನಡೆಯಿತು. ಕೆಚ್ಚೆದೆಯಿಂದ ಹೋರಾಡಿದರು. ಬಲವರ್ಧನೆ ಪಡೆ ಹಿಮಚ್ಚಾದಿತ ಭಜರಂಗ್ ಪೊಸ್ಟ್ ತಲುಪುವಾಗ ಕಾಪ್ಟನ್ ಅಮಿತ್ ಭಾರದ್ವಾಜ್ ಮತ್ತು ಹವಾಲ್ದಾರ ರಾಜವೀರ್ ಸಿಂಗ್ ಇಬ್ಬರೂ ಇಹಲೋಕ ತ್ಯಜಿಸಿ ಆಗಲೇ ೫೦ ಕ್ಕೂ ಹೆಚ್ಚು ದಿನಗಳು ಕಳೆದಿದ್ದವು. ದೇಹವಿಡಿ ಲೆಕ್ಕವಿಲ್ಲದಷ್ಟು ಗುಂಡುಗಳು ಹೊಕ್ಕಿದ್ದರೂ ಕೈ ಬೆರಳುಗಳು ಇನ್ನೂ ಬಂದೂಕಿನ ಟ್ರಿಗರ್ ಗಟ್ಟಿ ಹಿಡಿದಿದ್ದವು ಎಂದು ಕೊನೆಯ ಬಾರಿಗೆ ಅವರ ದೇಹವನ್ನು ನೋಡಿದವರು ಹೇಳುತ್ತಾರೆ. ಕೆಚ್ಚೆದೆಯ ಯೋಧರು, ಗೆಳೆಯರು ಒಂದಾಗಿ ಹೋರಾಡಿ ವೀರ ಮರಣವನ್ನಪ್ಪಿದ್ದರು ಭಜರಂಗ್ ಪೊಸ್ಟ್ನ ವೀರರು.ಕ್ಯಾಪ್ಟನ್ ಅಮಿತ್ ಭಾರದ್ವಾಜ್ ಮಾರ್ಚ್ ೪, ೧೯೭೨ ರಂದುರಾಜಸ್ಥಾನದ ಜೈಪುರದಿಂದ ಜನಿಸಿದರು. ಶ್ರೀ ಒ ಪಿ ಶರ್ಮಾ ಮತ್ತು ಶ್ರೀಮತಿ ಸುಶೀಲಾ ಶರ್ಮಾ ಅವರ ಪುತ್ರ ಕ್ಯಾಪ್ಟನ್ ಅಮಿತ್. ಅವರು ಸೇಂಟ್ ಕ್ಸೇವಿಯರ್ಸ್ ಬಾಲಕರ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಸೇಂಟ್‌ಕ್ಸೇವಿಯರ್ಸ್ ಓಲ್ಡ್ ಬಾಯ್ಸ್ ಅಸೋಸಿಯೇಶನ್ನ ಸಕ್ರಿಯ ಸದಸ್ಯರಾಗಿದ್ದರು. ಅವರು ಒಬ್ಬ ಕ್ರೀಡಾಪಟು ಮತ್ತು ಅತ್ಯುತ್ತಮ ಟೇಬಲ್ ಟೆನಿಸ್ ಮತ್ತು ಫುಟ್ಬಾಲ್ ಆಟಗಾರರಾಗಿದ್ದರು. ಅವರು ೧೯೯೭ ರಲ್ಲಿ ಸೈನ್ಯಕ್ಕೆ ಸೇರಿದರು ಮತ್ತು ಪ್ರಸಿದ್ಧ ಜಾಟ್ ರೆಜಿಮೆಂಟ್ನ ೪ ಜಾಟ್ಗೆ ನಿಯೋಜಿಸಲ್ಪಟ್ಟರು, ಇದು ಧೀರ ಸೈನಿಕರು ಮತ್ತು ಹಲವಾರು ಯುದ್ಧ ಗೌರವಗಳಿಗೆ ಹೆಸರುವಾಸಿಯಾದ ರೆಜಿಮೆಂಟ್. ಪಿಥೋರಗದಲ್ಲಿ ಅವರ ಮೊದಲ ಅಧಿಕಾರಾವಧಿಯ ನಂತರ, ಕ್ಯಾಪ್ಟನ್ ಅಮಿತ್ ಭಾರದ್ವಾಜ್ ಅವರನ್ನು ಕಾರ್ಗಿಲ್ನ ಕಾಕ್ಸಾರ್ ಪ್ರದೇಶಕ್ಕೆ ನೇಮಿಸಲಾಯಿತು. ರಾಜ್ವೀರ್ ಸಿಂಗ್ ಹರಿಯಾಣದ ಭವಾನಿ ಜಿಲ್ಲೆಯ ಮೌಡಿ ಗ್ರಾಮದವರು. ಅವರ ಹಳ್ಳಿಯ ಅನೇಕ ಯುವಕರಂತೆ ಅವರೂ ಸಹ ಬಾಲ್ಯದಿಂದಲೂ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಬಯಸಿದ್ದರು. ಅವರು ಕೂಡ ಪ್ರಸಿದ್ಧ ಜಾಟ್ ರೆಜಿಮೆಂಟ್ನ ೪ ಜಾಟ್ಗೆ ಸೇರಿಕೊಂಡರು, ಪ್ರಸಿದ್ದ ಜಾಟ್ ರೆಜಿಮೆಂಟಿನಲ್ಲಿ ಪ್ರಾರಂಭವಾದ ಗೆಳೆತನ ಕಾರ್ಗಿಲ್‌ನಲ್ಲಿ ವೀರ ಮರಣದೊಂದಿಗೆ ಅಂತ್ಯವಾಯಿತು.