ಸೈನಿಕರು ತಮ್ಮ ತರಬೇತಿಯಲ್ಲಿ ಕಲಿಯುವ ಶಿಸ್ತು ಗೊತ್ತಿರುವ ವಿಚಾರ. ಆ ಶಿಸ್ತು ಸುಮ್ಮನೆ ಬರುವುದಿಲ್ಲ, ತಮ್ಮಲ್ಲಿರುವ ಹುಟ್ಟು ದೇಶಾಭಿಮಾನದ ಫಲವದು. ಈ ಶಿಸ್ತು ಅವರ ಸೈನಿಕ ಜೀವನದಲ್ಲಿ ಕಾಲ ಕಳೆದಂತೆ ಜಾಗೃತಗೋಳ್ಳುತ್ತದೆ. ಎಷ್ಟೋ ಸಲ ಯುದ್ಧದ ಸಮಯದಲ್ಲಿ ತಾವೇ ಮುಂದೆ ನುಗ್ಗಿ ಹೋರಾಡುವ ಮತ್ತು ತಮ್ಮ ತಂಡ ಸರಾಗವಾಗಿ ಮುಂದುವರೆಯಲು ಅನುವು ಮಾಡುವ ಎಷ್ಟೋ ಉದಾಹರಣೆ ನೋಡ ಸಿಗುತ್ತದೆ. 1971 ರ ಇಂಡೋ-ಪಾಕ್ ಯುದ್ಧದಲ್ಲಿ ಲೆಫ್ಟಿನೆಂಟ್ ಕರ್ನಲ್ ವೇದ್ ಪ್ರಕಾಶ್ ಘಾಯ್ ಅವರು ೧೬ ಮದ್ರಾಸ್ ರೆಜಿಮೆಂಟ್‌ನ್ನು ಪಶ್ಚಿಮ ಮುಂಭಾಗದ ಶಾಕರ್‌ಗಢ್(ಬಸಂತರ್ ನದಿ) ಸೆಕ್ಟರ್‌ನಲ್ಲಿ ನಿಯೋಜಿಸಿದ್ದರು. ಯುದ್ಧದ ಸಮಯದಲ್ಲಿ ಶತ್ರುಗಳ ಭಾರೀ ವಿರೋಧದ ನಡುವೆ ನದಿ ಮತ್ತು ಗಣಿ ಅಡಚಣೆಯನ್ನು ದಾಟಿದ ನಂತರ, ಶತ್ರುಗಳು ಉಗ್ರವಾದ ಪ್ರತಿದಾಳಿಗಳನ್ನು ನಡೆಸಿದಾಗ ಕರ್ನಲ್ ವೇದ್ ಪ್ರಕಾಶ್ ಘಾಯ್‌ರ ಬೆಟಾಲಿಯನ್ ಸೇತುವೆಯ ಒಂದು ತುದಿಯನ್ನು ಆಕ್ರಮಿಸಿಕೊಂಡಿತ್ತು. ಲೆಫ್ಟಿನೆಂಟ್ ಕರ್ನಲ್ ಘಾಯ್ ತನ್ನ ಜನರನ್ನು ಒಟ್ಟುಗೂಡಿಸಿ, ರಾತ್ರಿಯಲ್ಲಿ ಪುನರಾವರ್ತಿತ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಿದರು. ಬೆಳಗಾಗುತ್ತಿದ್ದಂತೆ ಶತ್ರುಗಳು ಮತ್ತೆ ಟ್ಯಾಂಕ್‌ಗಳ ಬೆಂಬಲದೊಂದಿಗೆ ಪ್ರತಿದಾಳಿ ನಡೆಸಿದರು. ಆದರೆ ರಾತ್ರಿಯ ನಿರಂತರ ಭಾರೀ ಶೆಲ್ ದಾಳಿಗೆ ಒಳಗಾಗಿದ್ದರಿಂದ ಬೆಟಾಲಿಯನ್ ಅಲ್ಲಲ್ಲಿ ಹಂಚಿಹೋಗಿದ್ದರೂ ಲೆಫ್ಟಿನೆಂಟ್ ಕರ್ನಲ್ ಘಾಯ್ ತನ್ನ ವೈಯಕ್ತಿಕ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಂದುವರೆದು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ನಿರ್ಭಯವಾಗಿ ಕಾಲಿಟ್ಟು ತನ್ನ ಜನರನ್ನು ಪ್ರೋತ್ಸಾಹಿಸಿದರು. ಅವರ ಧೈರ್ಯ ಮತ್ತು ನಾಯಕತ್ವದಿಂದ ಸ್ಫೂರ್ತಿ ಪಡೆದ ಬೆಟಾಲಿಯನ್, ಟ್ಯಾಂಕ್‌ಗಳಿಂದ ಬೆಂಬಲಿತವಾದ ಶತ್ರುಗಳನ್ನು ಹಿಮ್ಮೆಟ್ಟಿಸಿತು. ಪರಿಸ್ಥಿತಿಯನ್ನು ಸ್ಥಿರಗೊಳಿಸಿದ ನಂತರ ಲೆಫ್ಟಿನೆಂಟ್ ಕರ್ನಲ್ ಘಾಯ್ ತನ್ನ ಪ್ರಧಾನ ಕಛೇರಿಗೆ ಹಿಂದಿರುಗುತ್ತಿದ್ದಾಗ ಶತ್ರುಗಳ ಶೆಲ್‌ನಿಂದ ಗಂಭೀರವಾಗಿ ಗಾಯಗೊಂಡರು. ಆದರೆ ಅವರು ವೈದ್ಯಕೀಯ ಆರೈಕೆ ಬಗ್ಗೆ ಕಾಳಜಿ ವಹಿಸದೆ ಸನ್ನಿವೇಶವನ್ನು ನಿಭಾಯಿಸಿದರು. ಮಿಲಿಟರಿ ನಾಯಕತ್ವ, ಧೈರ್ಯ ಮತ್ತು ಅತ್ಯುನ್ನತ ತ್ಯಾಗಕ್ಕೆ ಉತ್ತಮ ಉದಾಹರಣೆಯಾಗಿ ಅವರು ಯುದ್ಧಭೂಮಿಯಲ್ಲಿ ಹುತಾತ್ಮರಾದರು. ಲೆಫ್ಟಿನೆಂಟ್ ಕರ್ನಲ್ ವೇದ್ ಪ್ರಕಾಶ್ ಘಾಯ್ ಅವರ ಅತ್ಯುತ್ತಮ ಶೌರ್ಯ, ಅದಮ್ಯ ಮನೋಭಾವ ಮತ್ತು ತ್ಯಾಗಕ್ಕಾಗಿ ರಾಷ್ಟ್ರದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ "ಮಹಾ ವೀರ ಚಕ್ರ" ನೀಡಲಾಯಿತು. ಲೆಫ್ಟಿನೆಂಟ್ ಕರ್ನಲ್ ವೇದ್ ಪ್ರಕಾಶ್ ಘಾಯ್ ಅವರು ೨೨ ಫೆಬ್ರವರಿ 1935 ರಂದು ಉತ್ತರ ಪ್ರದೇಶದ ಡೆಹ್ರಾಡೂನ್‌ನಲ್ಲಿ ಶ್ರೀಮತಿ ದಯವಂತಿ ಘಾಯ್ ಮತ್ತು ಶ್ರೀದೇಶ್ ರಾಜ್ ಘಾಯ್ ದಂಪತಿಗಳ ಪುತ್ರನಾಗಿ ಜನಿಸಿದರು. ಅವರನ್ನು ೪ನೇ ಡಿಸೆಂಬರ್ 1954 ರಂದು ಮದ್ರಾಸ್ ರೆಜಿಮೆಂಟ್‌ಗೆ ನಿಯೋಜಿಸಲಾಯಿತು. ಸೇವಾ ವೃತ್ತಿಜೀವನದ ಅವಧಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಘಾಯ್ ಅವರು ಹಲವಾರು ಕಾರ್ಯಾಚರಣೆಯ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ವೇದ್ ಪ್ರಕಾಶ್ ಘಾಯ್ ತ್ಯಾಗಕ್ಕೆ ಕರಾವಳಿ ತರಂಗಿಣಿ ತಲೆಬಾಗಿ ನಮಿಸುತ್ತದೆ.